ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯದ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಜನಿವಾರ ಪ್ರಕರಣದ ಪ್ರಮುಖ ಸಂತ್ರಸ್ತರಾದ ಬೀದರ್‌ನ ವಿದ್ಯಾರ್ಥಿ ಸಚಿವ್ರತ ಕುಲಕರ್ಣಿ ಸಮಸ್ಯೆ ಇತ್ಯರ್ಥವಾದಂತಾಗಿದೆ.
ಬೀದರ್ : ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯದ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಜನಿವಾರ ಪ್ರಕರಣದ ಪ್ರಮುಖ ಸಂತ್ರಸ್ತರಾದ ಬೀದರ್‌ನ ವಿದ್ಯಾರ್ಥಿ ಸಚಿವ್ರತ ಕುಲಕರ್ಣಿ ಸಮಸ್ಯೆ ಇತ್ಯರ್ಥವಾದಂತಾಗಿದೆ. ಸುಚಿವ್ರತ್ ಕುಲಕರ್ಣಿ ಅವರು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯದ ಸರಾಸರಿ ಅಂಕಗಳನ್ನು ಆಧಾರವಾಗಿ ಪರಿಗಣಿಸಿ ಗಣಿತಕ್ಕೆ ಅಂಕ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಪರ ಕೋರ್ಸಗಳಿಗಾಗಿ ನಡೆಸಿದ ಸಿಇಟಿ ಪರೀಕ್ಷೆ ವೇಳೆ ಇಲ್ಲಿನ ಸಾಯಿ ಸ್ಫೂರ್ತಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಪ್ರವೇಶಕ್ಕೆ ಜನಿವಾರ ತೆಗೆಯಲು ಸಿಬ್ಬಂದಿ ಸೂಚಿಸಿದ್ದರು. ಆದರೆ ಜನಿವಾರ ತೆಗೆಯಲೊಪ್ಪದ ಸುಚಿವ್ರತ್ ಕುಲಕರ್ಣಿ ಪರೀಕ್ಷೆಗೆ ಹಾಜರಾಗದೆ ವಾಪಸಾಗಿದ್ದರು. ಇಲ್ಲಿನ ಗುರುನಾನಕ ಕಾಲೇಜು ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಯ ಈ ಪ್ರಕರಣ ಇಡೀ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ದೇಶಾದ್ಯಂತ ಖಂಡನೆಗೂ ಪ್ರಕರಣ ಕಾರಣವಾಗಿತ್ತು. ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ವರದಿ ಪಡೆದಿತ್ತು. ನಂತರ ನೋಟಿಸ್ ನೀಡಿದ ಮರುಕ್ಷಣದಲ್ಲೇ ಕಾಲೇಜು ಆಡಳಿತ ಮಂಡಳಿಯು ತನ್ನ ಪ್ರಾಚಾರ್ಯರು ಹಾಗೂ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿತ್ತು.
ಇನ್ನು ವಿದ್ಯಾರ್ಥಿಯ ಶೈಕ್ಷಣಿಕ ಕನಸನ್ನು ಈಡೇರಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಮ್ಮ ಭಾಲ್ಕಿಯ ಬಿಕೆಐಟಿ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡುವುದಾಗಿ ಘೋಷಿಸಿದ್ದರು. ರಾಜ್ಯ ಸರ್ಕಾರ ಸಿಇಟಿ ಮರು ಪರೀಕ್ಷೆ ಬರೆವುದು ಅಥವಾ ಭೌತಶಾಸ್ತ್ರ, ರಸಾಯನ ಶಾಸ್ತ್ರ ವಿಷಯದ ಸರಾಸರಿ ಅಂಕಗಳ ಆಧಾರವಾಗಿ ಪರಿಗಣಿಸಿ ಗಣಿತಕ್ಕೆ ಅಂಕ ನೀಡುವ ಎರಡು ಪ್ರಸ್ತಾವಗಳನ್ನು ವಿದ್ಯಾರ್ಥಿ ಮುಂದಿಟ್ಟಿತ್ತು.
ಇದೀಗ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಸರ್ಕಾರದ ಸರಾಸರಿ ಅಂಕ ನೀಡುವ ಪ್ರಸ್ತಾವನೆಗೊಪ್ಪಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ನನಗೆ ಈ ಅವಕಾಶ ನೀಡಿ ನ್ಯಾಯ ಒದಗಿಸಿದ ಕರ್ನಾಟಕ ಸರ್ಕಾರಕ್ಕೆ ನಾನು ಮತ್ತು ನನ್ನ ಪರಿವಾರದವರು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಹಾಗೂ ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ವಂದಿಸುತ್ತೇನೆ ಎಂದು ಸುಚಿವ್ರತ್ ತಿಳಿಸಿದ್ದಾರೆ.