;Resize=(412,232))
ಬೆಂಗಳೂರು : ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದ್ದರೂ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ಜು.1ರಿಂದ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇದರೊಂದಿಗೆ, 2 ದಶಕದಿಂದ ದೇಶದಲ್ಲಿ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂನರೇಗಾ) ಇತಿಹಾಸದ ಪುಟ ಸೇರಿದಂತಾಗಿದೆ.
ಬುಧವಾರ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಖಂಡ್ರೆ ಅವರು, ಗ್ರಾಮೀಣ ಜನರು, ಮಹಿಳೆಯರು, ಹಿಂದುಳಿದ ಸಮುದಾಯಗಳು ಹಾಗೂ ಇತರ ದುರ್ಬಲ ವರ್ಗಗಳ ಹಿತದೃಷ್ಟಿಯಿಂದ ಯೋಜನೆ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಯುಪಿಎ ಸರ್ಕಾರ ಪರಿಚಯಿಸಿದ್ದ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ವೇತನ ವೆಚ್ಚದ ಶೇ.90ರಷ್ಟನ್ನು ಭರಿಸುತ್ತಿತ್ತು. ರಾಜ್ಯಗಳು ಕೇವಲ ಶೇ.10ರಷ್ಟು ಮಾತ್ರ ನೀಡಬೇಕಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ವೆಚ್ಚವನ್ನು 60:40 ಅನುಪಾತದಲ್ಲಿ ಹಂಚಿಕೊಳ್ಳಬೇಕಾಗಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲೆ ಭಾರೀ ಆರ್ಥಿಕ ಹೊರೆ ಬೀಳಲಿದೆ ಎಂದರು.
2006ರಿಂದ 2026ರವರೆಗೆ ರಾಜ್ಯದಲ್ಲಿ ನರೇಗಾ ಯೋಜನೆ ಅಡಿ ಕೇಂದ್ರ ಸರ್ಕಾರ ಸುಮಾರು 56,492 ಕೋಟಿ ರು. ವೆಚ್ಚ ಮಾಡಿದೆ. ರಾಜ್ಯ ಸರ್ಕಾರ 4,821 ಕೋಟಿ ನೀಡಿದ್ದು, ಸುಮಾರು 182 ಕೋಟಿ ಮಾನವ-ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. ಆದರೆ ಹೊಸ ವ್ಯವಸ್ಥೆಯಡಿ ಒಂದು ವರ್ಷದಲ್ಲೇ ರಾಜ್ಯ ಸರ್ಕಾರವು 3,806 ಕೋಟಿ ರು. ವೆಚ್ಚ ಭರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯಗಳ ಜತೆ ಚರ್ಚಿಸಿಲ್ಲ:
ಹೊಸ ಯೋಜನೆಯನ್ನು ಸಂಸತ್ತಿನಲ್ಲಿ ಪರಿಚಯಿಸುವ ಮೊದಲು ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಆದರೆ ರಾಜ್ಯಗಳೊಂದಿಗೆ ಸಮರ್ಪಕ ಚರ್ಚೆ ನಡೆಸದೇ ಈ ಕಾನೂನನ್ನು ರೂಪಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಜೊತೆಗೆ ರಾಜ್ಯಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಪಾಲನ್ನು ಹಂತ ಹಂತವಾಗಿ ಕನಿಷ್ಠ 80:20 ಅನುಪಾತಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ ಎಂದು ಅವರು ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 5,709 ಕೋಟಿ ರು. ಅನುದಾನ ನೀಡಿದೆ. ರಾಜ್ಯದಿಂದ 3,806 ಕೋಟಿ ನೀಡಲಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಅದನ್ನು ಅನುಮೋದಿಸಿದ್ದಾರೆ ಎಂದು ಹೇಳಿದರು.
ಹಾನಿಕಾರಕ:
ಕೃಷಿ ಹಂಗಾಮಿನಲ್ಲಿ 60 ದಿನಗಳ ಕಾಲ ಈ ಯೋಜನೆಯಡಿ ಉದ್ಯೋಗ ನೀಡುವುದನ್ನು ನಿಷೇಧಿಸಿರುವ ಕೇಂದ್ರದ ನಿರ್ದೇಶನವನ್ನು ಟೀಕಿಸಿದ ಸಚಿವ ಖಂಡ್ರೆ, ಈ ಕ್ರಮ ಗ್ರಾಮೀಣ ಕುಟುಂಬಗಳಿಗೆ ಹಾನಿಕಾರಕವಾಗಲಿದೆ. ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಗ್ರಾಮೀಣ ಕಾರ್ಮಿಕರಿಗೆ ಕೃಷಿ ಹಂಗಾಮಿನಲ್ಲಿಯೂ ಉದ್ಯೋಗ ಸಿಗುತ್ತಿಲ್ಲ. ಈ ನಿರ್ಬಂಧವು ಅವರ ಜೀವನೋಪಾಯವನ್ನು ಕಸಿದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಈ ನಿಯಮಕ್ಕೆ ರಾಜ್ಯ ಸರ್ಕಾರ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಹೇಳಿದರು.
ಜೂ.28ರಂದು ದೆಹಲಿಯಲ್ಲಿ ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಲ್ಲ ರಾಜ್ಯಗಳ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.
ಬೇಡಿಕೆ ಆಧಾರದ ಮೇಲೆ ಉದ್ಯೋಗ ಒದಗಿಸಬೇಕು ಎಂದು ಹೇಳಿದ ಖಂಡ್ರೆ, ಕರ್ನಾಟಕದಲ್ಲಿ ಪ್ರಸ್ತುತ ದಿನಗೂಲಿ 375 ರು. ನೀಡಲಾಗುತ್ತಿದೆ, ರಾಜ್ಯ ಕನಿಷ್ಠ ವೇತನ ಹೆಚ್ಚಿಸಿರುವುದರಿಂದ ಕೇಂದ್ರ ಸರ್ಕಾರವೂ ತನ್ನ ವೇತನ ದರಗಳನ್ನು ಅದಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಹೇಳಿದರು.
ಕಳೆದ ಮೂರು ತಿಂಗಳಲ್ಲಿ ರಾಜ್ಯವು 1.40 ಲಕ್ಷ ಮಾನವ-ದಿನಗಳ ಉದ್ಯೋಗ ಸೃಷ್ಟಿಸಿದ್ದು, ವಾರ್ಷಿಕ ಗುರಿಯಾಗಿ 9 ಕೋಟಿ ಮಾನವ-ದಿನಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ತಿಂಗಳು 80-90 ಲಕ್ಷ ಮಾನವ-ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ನರೇಗಾ ಅಡಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಏಳು ಸಾವಿರಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿಯ ಜೀವನೋಪಾಯಕ್ಕೆ ಯಾವುದೇ ಹಾನಿಯಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
- 2 ದಶಕಗಳಿಂದ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಈಗ ತೆರೆಗೆ
- ನರೇಗಾ ಯೋಜನೆಗೆ ಪ್ರತಿಯಾಗಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರ
- ರಾಜ್ಯಗಳ ಜತೆ ಸಮಾಲೋಚನೆ ನಡೆಸದೆ ಜಿ ರಾಮ್ ಜಿ ತರಲಾಗಿದೆ ಎಂದು ಕರ್ನಾಟಕ ಆಕ್ರೋಶ
- ಯೋಜನೆ ವಿರುದ್ಧ ನಿರ್ಣಯ. ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ನಿರ್ಧರಿಸಿದ್ದ ಸರ್ಕಾರ
- ಇದೀಗ ಜನರ ಹಿತದೃಷ್ಟಿಯಿಂದ ಜು.1ರಿಂದಲೇ ಯೋಜನೆ ಜಾರಿಗೆ ತರುವುದಾಗಿ ಘೋಷಣೆ
ಯುಪಿಎ ಸರ್ಕಾರ ಪರಿಚಯಿಸಿದ್ದ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ವೇತನ ವೆಚ್ಚದ ಶೇ.90ರಷ್ಟನ್ನು ಭರಿಸುತ್ತಿತ್ತು. ರಾಜ್ಯಗಳು ಕೇವಲ ಶೇ.10ರಷ್ಟು ಮಾತ್ರ ನೀಡಬೇಕಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ವೆಚ್ಚವನ್ನು 60:40 ಅನುಪಾತದಲ್ಲಿ ಹಂಚಿಕೊಳ್ಳಬೇಕಾಗಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲೆ ಭಾರೀ ಆರ್ಥಿಕ ಹೊರೆ ಬೀಳಲಿದೆ.
- ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ