ಕನ್ನಡ ಭಾಷಾ ಬೋಧನಾ ಅವಧಿ 4 ಗಂಟೆಗೆ ಹೆಚ್ಚಳ

ಸಾರಾಂಶ

ರಾಜ್ಯ ಶಿಕ್ಷಣ ನೀತಿಯಲ್ಲಿ (ಎಸ್‌ಇಪಿ) ಪದವಿ ವ್ಯಾಸಂಗದಲ್ಲಿ ಕನ್ನಡ ಭಾಷಾ ವಿಷಯ ಬೋಧನೆಗೆ ನಿಗದಿ ಪಡಿಸಿದ್ದ 3 ಗಂಟೆಗಳ ಅವಧಿಗೆ (1 ವಾರಕ್ಕೆ) ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಈ ಹಿಂದೆ ಇದ್ದ 4 ಗಂಟೆಗಳ ಕಾಲವನ್ನೇ ಮರು ನಿಗದಿ ಪಡಿಸಲು ಒಪ್ಪಿಕೊಂಡಿದೆ.

ಬೆಂಗಳೂರು : ರಾಜ್ಯ ಶಿಕ್ಷಣ ನೀತಿಯಲ್ಲಿ (ಎಸ್‌ಇಪಿ) ಪದವಿ ವ್ಯಾಸಂಗದಲ್ಲಿ ಕನ್ನಡ ಭಾಷಾ ವಿಷಯ ಬೋಧನೆಗೆ ನಿಗದಿ ಪಡಿಸಿದ್ದ 3 ಗಂಟೆಗಳ ಅವಧಿಗೆ (1 ವಾರಕ್ಕೆ) ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಈ ಹಿಂದೆ ಇದ್ದ 4 ಗಂಟೆಗಳ ಕಾಲವನ್ನೇ ಮರು ನಿಗದಿ ಪಡಿಸಲು ಒಪ್ಪಿಕೊಂಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಪ್ರತಿ ಸೆಮಿಸ್ಟರ್‌ನಲ್ಲಿ ಕನ್ನಡ ಭಾಷಾ ವಿಷಯ ಬೋಧನೆಗೆ 4 ಗಂಟೆಗಳ ಅವಧಿ ನಿಗದಿ ಮಾಡಲಾಗಿತ್ತು. ಆದರೆ, ಎಸ್‌ಇಪಿ ಅಡಿ ನಾಲ್ಕು ವರ್ಷಗಳ ಪದವಿ ರದ್ದು ಮಾಡಿ ಹಿಂದೆ ಇದ್ದಂತೆ ಮೂರು ವರ್ಷದ ಪದವಿ ಪುನರ್‌ ಜಾರಿಗೊಳಿಸಿದ ಬಳಿಕ ಕನ್ನಡ ಭಾಷಾ ಬೋಧನೆಗೆ ಇದ್ದ ಅವಧಿಯನ್ನು 3 ಗಂಟೆಗಳಿಗೆ ಇಳಿಕೆ ಮಾಡಲಾಗಿತ್ತು.

ಈ ಬಗ್ಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ಇನ್‌ಇಪಿಯಲ್ಲಿದ್ದ ಬೋಧನಾ ಅವಧಿಯನ್ನು ಕಡಿತ ಮಾಡಲು ಕಾರಣಗಳೇ ಇಲ್ಲ. ಆದರೂ, ಕಡಿತ ಮಾಡಿದ್ದು, ಇದು ಕನ್ನಡ ಭಾಷೆಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದನ್ನು ಶೀಘ್ರ ಸರಿಪಡಿಸಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಇದಕ್ಕೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮೂರು ಗಂಟೆಗಳ ಬದಲಾಗಿ ಮೊದಲಿದ್ದಂತೆ ನಾಲ್ಕು ಗಂಟೆಗಳಿಗೆ ಮರು ನಿಗದಿ ಮಾಡುವಂತೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಬರಗೂರು ರಾಮಚಂದ್ರಪ್ಪ ಅವರ ಕಾಳಜಿಯ ಬಗ್ಗೆ ಸಚಿವರು ಅಭಿನಂದನೆ ತಿಳಿಸಿದ್ದಾರೆ.

Share this article