ಕರ್ನಾಟಕ ಬಜೆಟ್ 2025 : ಅನ್ನಭಾಗ್ಯದಡಿ 10 ಕೆ. ಜಿ. ಅಕ್ಕಿ ವಿತರಣೆ : ಯಾವಾಗಿಂದ ಆರಂಭ ?

ಸಾರಾಂಶ

ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲು ಒಂದೂವರೆ ವರ್ಷದಿಂದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡುತ್ತಿದ್ದ ಸಹಾಯಧನ ಸ್ಥಗಿತ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

 ಬೆಂಗಳೂರು : ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲು ಒಂದೂವರೆ ವರ್ಷದಿಂದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡುತ್ತಿದ್ದ ಸಹಾಯಧನ ಸ್ಥಗಿತ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಇದರಿಂದ ಫಲಾನುಭವಿಗಳಿಗೆ ಮಾರ್ಚ್ ಮಾಸದಿಂದಲೇ ಕೇಂದ್ರದ ಐದು ಕೆ.ಜಿ. ಉಚಿತ ಅಕ್ಕಿ ಜತೆ ಅನ್ನಭಾಗ್ಯದ ಬಳುವಳಿಯೂ ಸೇರಿ ಒಟ್ಟು 10 ಕೆ.ಜಿ. ಅಕ್ಕಿ ಲಭ್ಯವಾಗಲಿದೆ.

ಈ ಅನ್ನಭಾಗ್ಯ ಯೋಜನೆಯಿಂದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಒಟ್ಟಾರೆ ಬಜೆಟ್‌ನ ಶೇ.2ರಷ್ಟು ಮೊತ್ತವನ್ನು ಅನುದಾನವಾಗಿ ನೀಡಿದಂತಾಗುತ್ತಿದೆ ಅಂದರೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಗೆ 8,275 ಕೋಟಿ ರು. ಮೀಸಲು ಇಡಲಾಗಿದೆ. ಇದು ಒಟ್ಟು ಬಜೆಟ್‌ನ ಶೇ.2ರಷ್ಟು ಮೊತ್ತವಾಗಿವೆ. 2024-25ನೇ ಸಾಲಿನ ಬಜೆಟ್‌ನಲ್ಲಿ 9,963 ಕೋಟಿ ರು. ಒದಗಿಸಲಾಗಿತ್ತು.

ಅಕ್ಕಿ ಕಡಿಮೆ ದರಕ್ಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನೇರ ನಗದು (ಡಿಬಿಟಿ) ರದ್ದುಗೊಳಿಸಿ ಅಕ್ಕಿಯನ್ನೇ ನೀಡಲು ಸರ್ಕಾರ ನಿರ್ಧರಿಸಿತ್ತು. ಅದನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಮಾರ್ಚ್ ತಿಂಗಳಿನಿಂದಲೇ 10 ಕೆ.ಜಿ. ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ. ಇದರಿಂದ ಕೇಂದ್ರದ 5 ಕೆ.ಜಿ. ಉಚಿತ ಅಕ್ಕಿಯೊಂದಿಗೆ ರಾಜ್ಯ ಸರ್ಕಾರದಿಂದ 4.21 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಮತ್ತೈದು ಕೆ.ಜಿ. ಅಕ್ಕಿ ಸೇರಿ ಪ್ರತಿ ಫಲಾನುಭವಿಗಳಿಗೆ ಒಟ್ಟು 10 ಕೆ.ಜಿ. ಅಕ್ಕಿ ಲಭ್ಯವಾಗಲಿದೆ.

ಸಗಟು ಗೋದಾಮುಗಳಲ್ಲಿ ಪಾರದರ್ಶಕತೆ ತರುವುದರೊಂದಿಗೆ ಸೋರಿಕೆ ತಡೆಗಟ್ಟಲು ಸಿಸಿಟಿವಿ ಅಳವಡಿಕೆ, ಜಿಪಿಎಸ್‌ ಆಧಾರಿತ ವಾಹನ ಟ್ರ್ಯಾಕಿಂಗ್‌ ವ್ಯವಸ್ಥೆ ಮತ್ತು ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ಸ್ಥಾಪಿಸಲು 5 ಕೋಟಿ ರು. ಅನುದಾನ ಒದಗಿಸಲಾಗಿದೆ. 

ಕಳೆದ ವರ್ಷ ಜಾರಿಗೆ ತರಲಾಗಿದ್ದ ಅನ್ನ-ಸುವಿಧಾ ಯೋಜನೆ ಆಶಯದಂತೆ 80 ವರ್ಷ ಮೇಲ್ಪಟ್ಟ 2 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರ ಮನೆಗಳಿಗೆ ಆಹಾರ ಧಾನ್ಯ ತಲುಪಿಸಲಾಗುತ್ತಿತ್ತು. ಈ ಯೋಜನೆ ವಿಸ್ತರಿಸಿರುವ ಸರ್ಕಾರ 75 ವರ್ಷ ಮೇಲ್ಪಟ್ಟ ನಾಗರಿಕರ ಮನೆಗೂ ಆಹಾರ ಧಾನ್ಯ ತಲುಪಿಸಲಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಿಕ್‌ ವೇಯಿಂಗ್‌ ಮಷಿನ್‌ಪಾಯಿಂಟ್‌ ಆಫ್‌ ಸೇಲ್ ಸಿಸ್ಟಂಗಳನ್ನು ಸಾರ್ವಜನಿಕ ವಿತರಣಾ ಪದ್ಧತಿಯ ಐಟಿ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಅನ್ನಭಾಗ್ಯ ಯೋಜನೆಯ ಸಗಟು ಲಾಭಾಂಶ ಪ್ರತಿ ಕ್ವಿಂಟಲ್‌ಗೆ 35 ರು.ಗಳಿಂದ 45 ರು.ಗಳಿಗೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.

ಇದು ಬಡವರ ಬಜೆಟ್‌

ಈ ಬಜೆಟ್‌ನಲ್ಲಿ 10 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಿರುವುದು 4.21 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದು ಬಡವರ ಬಜೆಟ್‌. ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆ ಈಡೇರಿದೆ. ಈಗ ಕೊಟ್ಟಿರುವ ಅನುದಾನದಲ್ಲಿ ಪಡಿತರ ಕಾರ್ಡ್‌ದಾರರಿಗೆ ದಿನನಿತ್ಯ ಬಳಕೆಗೆ ಬೇಕಾದಂತಹ ಬೇಳೆಕಾಳು, ಸಕ್ಕರೆ, ಅಡುಗೆ ಎಣ್ಣೆ ಇತ್ಯಾದಿಗಳನ್ನು ಕೊಟ್ಟಿದ್ದರೆ ಇನ್ನೂ ಹೆಚ್ಚಿನ ಸಹಕಾರ ಸಿಗುತ್ತಿತ್ತು. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗುತ್ತಿದ್ದ ಸಮಸ್ಯೆ ಕಡಿಮೆಯಾಗುತ್ತಿತ್ತು.

- ಟಿ.ಕೃಷ್ಣಪ್ಪ, ರಾಜ್ಯಾಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಸಂಘ

Share this article