ಕಲಾವಿದರ ಮಾಸಾಶನವನ್ನು ₹2,000 ದಿಂದ ₹2,500 ಹೆಚ್ಚಿಸುವ ಮೂಲಕ ತಮ್ಮ ಹದಿನಾರನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಬೆಂಗಳೂರು : ಕಲಾವಿದರ ಮಾಸಾಶನವನ್ನು ₹2,000 ದಿಂದ ₹2,500 ಹೆಚ್ಚಿಸುವ ಮೂಲಕ ತಮ್ಮ ಹದಿನಾರನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಜತೆಗೆ, ಅಂತಾರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ತಾತ್ವಿಕ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ವಿಸ್ತೃತ ವರದಿ ಪಡೆಯುತ್ತೇವೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ₹ 1 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿದ್ದಾರೆ.
ಸಾಮರಸ್ಯದ ಬದುಕು ಪ್ರೇರೇಪಿಸುವ ರಾಮಮನೋಹರ್ ಲೋಹಿಯಾ, ಇತರ ಮಹನೀಯರ ಪುಸ್ತಕಗಳಲ್ಲಿನ ಸೌಹಾರ್ದತೆಯ ಅಂಶವನ್ನು ಕ್ರೋಢೀಕರಿಸಿ ಕನ್ನಡದಲ್ಲಿ ಪ್ರಕಟಿಸುತ್ತೇವೆ. ಈ ಕುರಿತು ಕಮ್ಮಟ, ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ಹೇಳಿದ್ದಾರೆ.
ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣದಲ್ಲಿ ₹3 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಚಯ, ಥಿಯೇಟರ್ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು. ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗೆ ₹ 2ಕೋಟಿ ಅನುದಾನ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಬಾಗಲಕೋಟೆ ಬಾದಾಮಿಯ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮಕ್ಕೆ ₹2 ಕೋಟಿ, ʻಕನ್ನಡ ಭಾರತಿʼ ಪುಸ್ತಕ ಮಾಲಿಕೆಯಡಿ ಶ್ರೇಷ್ಠ ಸಾಧಕರ ಜೀವನವನ್ನು ಪರಿಚಯಿಸಲು ₹50 ಲಕ್ಷ ಮೊತ್ತದಲ್ಲಿ ಪುಸ್ತಕ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.
ಇನ್ನು, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಟ್ರಸ್ಟ್‌ನ ಕಾರ್ಯಚಟುವಟಿಕೆಗೆ, ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ₹ 1ಕೋಟಿ, ಬೊಳುವಾರು ಮೊಹಮ್ಮದ್ ಕುಂಞಿ ‘ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ₹1 ಕೋಟಿ ವೆಚ್ಚದಲ್ಲಿ ನಾಟಕ ರೂಪದಲ್ಲಿ ನಿರ್ಮಿಸಿ ರಾಜ್ಯಾದ್ಯಂತ ಪ್ರದರ್ಶಿಸಲಾಗುವುದು ಎಂದಿದ್ದಾರೆ.
ಬೆಳಗಾವಿ ಘಟಪ್ರಭಾದ ಆರೋಗ್ಯ ಧಾಮದಲ್ಲಿ ಡಾ. ಎನ್.ಎಸ್.ಹರ್ಡೀಕರ ಸ್ಮಾರಕ ನಿರ್ಮಿಸಲು ₹2 ಕೋಟಿ ಒದಗಿಸಲಾಗುವುದು. ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರಕ್ಕೆ, ತತ್ವಪದ ಪಾರಿಭಾಷಿಕ ಪದಕೋಶ ಸಿದ್ಧತೆ ಮತ್ತು ಪ್ರಕಟಣೆಗೆ ₹ 1ಕೋಟಿ, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಪ್ರಾಧಿಕಾರ ಸ್ಥಾಪಿಸಿ ಅವರು ವ್ಯಾಸಂಗ ಮಾಡಿದ, ಗೌರಿಬಿದನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಉನ್ನತೀಕರಣ ಮಾಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಕಾಡೆಮಿಗಳಿಗೆ ಹಣ ಕೊಡಬೇಕಿತ್ತು
ಕಲಾವಿದರ ಮಾಸಾಶನ ಹೆಚ್ಚಿಸಿದ್ದು ಒಳ್ಳೆಯದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ಸಾಹಿತ್ಯ, ಲಲಿತಕಲಾ ಸೇರಿ ಇತರೆ ಅಕಾಡೆಮಿಗಳು ಅನುದಾನವಿಲ್ಲದೆ ಸೊರಗುತ್ತಿವೆ. ಹೀಗಿರುವಾಗ ಬಜೆಟ್‌ನಲ್ಲಿ ಅನುದಾನ ನೀಡದಿರುವುದು, ಉಲ್ಲೇಖವನ್ನೂ ಮಾಡದಿರುವುದು ಬೇಸರದ ವಿಚಾರ. ಜೊತೆಗೆ ಟ್ರಸ್ಟ್ ಅಥವಾ ವ್ಯಕ್ತಿ ಕೇಂದ್ರಿತವಾಗಿ ಅನುದಾನ ನೀಡಿರುವ ಬಗ್ಗೆ ಪ್ರಶ್ನೆಗಳು ಬರುತ್ತವೆ. ಟ್ರಸ್ಟ್ ಮೂಲಕವೇ ಸಂಸ್ಕೃತಿ ಬೆಳೆಸುವ ಪ್ರಯತ್ನವೇ ಸೀಮಿತ ಎನ್ನಿಸುತ್ತಿದೆ.
- ಎಂ.ಎಸ್.ಮೂರ್ತಿ, ಹಿರಿಯ ಕಲಾವಿದರು