;Resize=(412,232))
ಬೆಂಗಳೂರು : ನ್ಯಾಯಾಂಗ ಕಾರ್ಯಕಲಾಪಗಳಲ್ಲಿ ತಂತ್ರಜ್ಞಾನ ಬಳಕೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನ ಮೂಲಕ ರಾಜ್ಯದ ನ್ಯಾಯಾಲಯಗಳ ಕಾರ್ಯ ಕಲಾಪಗಳ ಪ್ರತಿಲೇಖನ (ಟ್ರಾನ್ಸ್‌ಕ್ರಿಪ್ಷನ್) ಹಾಗೂ ನ್ಯಾಯಾಂಗ ದಾಖಲೆಗಳ ಅನುವಾದಕ್ಕಾಗಿ ‘ಸ್ಮಾರ್ಟ್ ಸಿಸ್ಟಂ’ (Smart System) ಯೋಜನೆ ಜಾರಿಗೆ ತರಲು ಉದ್ದೇಶಿಸಿರುವ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನ್ಯಾಯಾಂಗಕ್ಕೆ ಒಟ್ಟು 60 ಕೋಟಿ ರು. ಮೀಸಲಿಟ್ಟಿದೆ.
ಸ್ಮಾರ್ಟ್ ಸಿಸ್ಟಂ ಯೋಜನೆ ಅನುಷ್ಠಾನಗೊಳಿಸಲು 2 ಕೋಟಿ ರು. ಹಾಗೂ ಹೈಕೋರ್ಟ್/ಜಿಲ್ಲಾ ನ್ಯಾಯಾಲಯಗಳಲ್ಲಿನ ಗ್ರಂಥಾಲಯಗಳ ಮೇಲ್ದರ್ಜೆಗೇರಿಸಲು ಮತ್ತು ಡಿಜಿಟಲ್ ಗ್ರಂಥಾಲಯ ಆರಂಭಿಸಲು 2 ಕೋಟಿ ಘೋಷಿಸಲಾಗಿದೆ. ವಕೀಲರಿಗೆ ಕಾನೂನು ಪುಸ್ತಕಗಳು ಸುಲಭವಾಗಿ ದೊರೆಯಲು ರಾಜ್ಯ ಅಡ್ವೊಕೇಟ್ ಜನರಲ್ ಕಚೇರಿ ಸಹಯೋಗದೊಂದಿಗೆ ‘ಆನ್‌ಲೈನ್ ಗ್ರಂಥಾಲಯ’ ಆರಂಭಿಸಲು 50 ಲಕ್ಷ ರು. ಮೀಸಲಿಡಲಾಗಿದೆ.
ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂ ಸ್ವಾಧೀನ ಸಂಬಂಧ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಹಾಗೂ ಸೂಕ್ತ ಪರಿಹಾರ ಒದಗಿಸಲು ಬಾಗಲಕೋಟೆ ಜಿಲ್ಲೆಯಲ್ಲಿ ‘ಭೂಸ್ವಾಧೀನ ಪ್ರಕರಣಗಳ ವಿಶೇಷ ತ್ವರಿತಗತಿ ನ್ಯಾಯಾಲಯ’ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 50 ಕೋಟಿ ರು. ನೀಡಲು, ಕುಕನೂರು ಮತ್ತು ಕಾರಟಗಿ ತಾಲೂಕಿನಲ್ಲಿ ಜೆಎಂಎಫ್‌ಸಿ ಕೋರ್ಟ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 18 ಕೋಟಿ ರು. ವ್ಯಯಿಸಲು ತೀರ್ಮಾನಿಸಿರುವುದಾಗಿ ಸರ್ಕಾರ ತಿಳಿಸಿದೆ.
ವಕೀಲರ ಸಂಘಕ್ಕೆ ಹಣ ನೀಡಿಲ್ಲ
ನ್ಯಾಯಾಲಯಗಳಲ್ಲಿನ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಸ್ಮಾರ್ಟ್ ಸಿಸ್ಟಂ ಯೋಜನೆ ಜಾರಿ, ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಹಣ ನೀಡಿರುವುದು ಸ್ವಾಗತಾರ್ಹ ಕ್ರಮ. ಆದರೆ, ರಾಜ್ಯದಲ್ಲಿ 215 ವಕೀಲರ ಸಂಘಗಳಿವೆ. ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಕ್ಕೆ ಸರ್ಕಾರ ವಾರ್ಷಿಕ ತಲಾ 25 ಮತ್ತು 40 ಸಾವಿರ ರು. ಅನುದಾನ ನೀಡುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಈ ಅನುದಾನ ನೀಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗುವ ನಿರೀಕ್ಷೆ ಹುಸಿಯಾಗಿದೆ. ಸರ್ಕಾರ ಕೂಡಲೇ ವಕೀಲರ ಸಂಘಗಳಿಗೆ ಅನುದಾನ ಘೋಷಿಸಬೇಕು ಮತ್ತು ಅನುದಾನ ಮೊತ್ತವನ್ನು ಒಂದರಿಂದ ಎರಡು ಲಕ್ಷ ರು.ಗೆ ಹೆಚ್ಚಿಸಬೇಕು.
- ಎಸ್.ಎಸ್. ಮಿಟ್ಟಲಕೋಡ, ಅಧ್ಯಕ್ಷರು, ಕರ್ನಾಟಕ ವಕೀಲರ ಪರಿಷತ್
ಕೋರ್ಟ್ ದಾಖಲೆಗಳ ಅನುವಾದಕ್ಕಾಗಿ
ಸ್ಮಾರ್ಟ್ ಸಿಸ್ಟಂ ಯೋಜನೆ ಅನುಷ್ಠಾನ
- ನ್ಯಾಯಾಂಗಕ್ಕೆ ಈ ಬಾರಿಯ ಬಜೆಟ್‌ನಲ್ಲಿ 60 ಕೋಟಿ ಮೀಸಲು
- ಎಐ ಬಳಸಿ ಕೋರ್ಟ್ ಕಲಾಪಗಳ ಟ್ರಾನ್ಸ್‌ಕ್ರಿಪ್ಷನ್‌ಗೆ ವ್ಯವಸ್ಥೆ
- ಕೋರ್ಟ್‌ಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ 2 ಕೋಟಿ
- ಕೃಷ್ಣಾ ಸ್ವಾಧೀನ ಕೇಸ್‌ಣ ವಿಲೇವಾರಿಗೆ ತ್ವರಿಗತಿ ಕೋರ್ಟ್
- ಕೊಪ್ಪಳದಲ್ಲಿ 50 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ