;Resize=(412,232))
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿ.31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಒಂದು ಬಾರಿ ಮಾತ್ರ ಅನ್ವಯಿಸಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಐದು ವರ್ಷ ಸಡಿಲಗೊಳಿಸಲು ಗುರುವಾರ ನಡೆದ ರಾಜ್ಯ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇದರಿಂದ ಸಾಮಾನ್ಯ ವರ್ಗಕ್ಕೆ ಅರ್ಜಿ ಸಲ್ಲಿಸಲು ಈಗಿರುವ 35 ವರ್ಷಗಳ ಗರಿಷ್ಠ ವಯೋಮಿತಿ 40 ವರ್ಷಕ್ಕೆ, ಹಿಂದುಳಿದ ವರ್ಗಗಳಿಗೆ ಇರುವ 38 ವರ್ಷಗಳ ವಯೋಮಿತಿ 43 ವರ್ಷಗಳಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಇರುವ 40 ವರ್ಷಗಳ ವಯೋಮಿತಿ 45 ವರ್ಷಗಳಿಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಸರ್ಕಾರದ ಈ ನಿರ್ಧಾರದಿಂದ ವಯಸ್ಸಿನ ಕಾರಣದಿಂದ ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವ ಆತಂಕದಲ್ಲಿದ್ದ ಲಕ್ಷಾಂತರ ಅಭ್ಯರ್ಥಿಗಳು ನಿರಾಳರಾದಂತಾಗಿದೆ.
ರಾಜ್ಯದಲ್ಲಿ ಒಳ ಮೀಸಲಾತಿ ವಿವಾದ ಮತ್ತಿತರ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ನೇಮಕಾತಿ ವಿಳಂಬ ಆಗಿದೆ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಇಳಿದಿರುವ ಉದ್ಯೋಗ ಆಕಾಂಕ್ಷಿಗಳಿಂದ ವಯೋಮಿತಿಯನ್ನು 5 ವರ್ಷ ಸಡಿಲಿಕೆ ಮಾಡಬೇಕೆಂಬ ಒತ್ತಾಯ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬರ್‌ನಲ್ಲಿ ಎಸ್ಸಿ ಒಳ ಮೀಸಲಾತಿ ಜಾರಿಗೆ ನಿರ್ಧರಿಸಿದ್ದ ರಾಜ್ಯ ಸರ್ಕಾರ ಸೆ.6 ರಂದು ವಯೋಮಿತಿಯನ್ನು ಎರಡು ವರ್ಷ ಸಡಿಲಿಕೆ ಮಾಡಿ ಆದೇಶಿತ್ತು. ಆದರೆ, ಉದ್ಯೋಗಾಕಾಂಕ್ಷಿಗಳಿಂದ ಇದಕ್ಕೆ ವಿರೋಧ ಮುಂದುವರೆದಿತ್ತು. ಹಾಗಾಗಿ ಸೆ. 29 ರಂದು ಪರಿಷ್ಕೃತ ಆದೇಶ ಹೊರಡಿಸಿದ್ದ ಸರ್ಕಾರ 2025 ರಿಂದ ಡಿಸೆಂಬರ್ 27, 2027 ರವರೆಗಿನ ಅಧಿಸೂಚನೆಗಳಿಗೆ ಅನ್ವಯಿಸುವಂತೆ ಮೂರು ವರ್ಷ ವಯೋಮಿತಿ ಸಡಿಲಿಸಿತ್ತು.
ಆದರೆ, ಎಸ್ಸಿ ಒಳ ಮೀಸಲಾತಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50ಕ್ಕೆ ಸೀಮಿತಗೊಳಿಸಬೇಕೇ ಅಥವಾ ಶೇ.56 ಮೀಸಲಾತಿ ನೀಡಬಹುದೇ ಎಂಬುದೂ ಸಹ ನ್ಯಾಯಾಲಯದಲ್ಲಿ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಿದ್ದು, ಸಾವಿರಾರು ಮಂದಿ ವಯೋಮಿತಿ ಕಾರಣಕ್ಕಾಗಿಯೇ ಉದ್ಯೋಗಕ್ಕೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸಿವಿಲ್ ಸೇವೆಗಳಿಗೆ ನೇರ ನೇಮಕಾತಿಗೆ ಆಯಾ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಅನ್ವಯಿಸುವಂತೆ ಐದು ವರ್ಷಗಳವರೆಗೆ ಸಡಿಲಿಕೆ ಮಾಡಲು ಸಂಪುಟ ತೀರ್ಮಾನಿಸಿದೆ.
ರಾಜ್ಯದ 22 ಹಿಂದುಳಿದ ಹಾಗೂ ದಲಿತ ಸಮುದಾಯದವರ ಮಠಗಳಿಗೆ ರಾಜಧಾನಿ ಬೆಂಗಳೂರಿನಲ್ಲಿ ಜಾಗ ಮಂಜೂರು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿಯಲ್ಲಿ ಈ ಮಠಗಳಿಗೆ ಜಾಗ ಗುರುತಿಸಲಾಗಿದೆ. ಗ್ರಾಮದ ಸರ್ವೆ ನಂ.57 ಮತ್ತು 58 ರಲ್ಲಿರುವ ಸರ್ಕಾರಿ ಜಮೀನನ್ನು 22 ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದೇವಾಂಗ ಸಮುದಾಯದ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಮಠಗಳು, ಸಂಘ ಸಂಸ್ಥೆಗಳಿಗೆ ಕನಿಷ್ಠ 2 ರಿಂದ 2.5 ಎಕರೆ ವರೆಗೆ ಸರ್ಕಾರಿ ಜಮೀನು ನೀಡಲು ಸರ್ಕಾರ ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಈ ವಿಷಯ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ ಎಂದು ಕೂಡ ಹೇಳಿದ್ದರು. ಅದರಂತೆ ಕಳೆದ ಸಂಪುಟದಲ್ಲೇ ಈ ವಿಷಯ ಚರ್ಚೆಗೆ ಬಂದಿತ್ತಾದರು ಯಾವುದೇ ನಿರ್ಧಾರ ಆಗದೆ ಮುಂದೂಡಿಕೆಯಾಗಿತ್ತು. ಈ ಬಾರಿಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
- ಸಾಮಾನ್ಯ ವರ್ಗಕ್ಕೆ ಈಗಿರುವ 35 ವರ್ಷಗಳ ಗರಿಷ್ಠ ವಯೋಮಿತಿ 40 ವರ್ಷಕ್ಕೇರಿಕೆ
- ಹಿಂದುಳಿದ ವರ್ಗಗಳಿಗೆ ಇರುವ 38 ವರ್ಷಗಳ ವಯೋಮಿತಿ 43 ವರ್ಷಗಳಿಗೆ ಹೆಚ್ಚಳ
- ಎಸ್ಸಿ,ಎಸ್ಟಿಗಳಿಗೆ ಇರುವ 40 ವರ್ಷಗಳ ವಯೋಮಿತಿ 45 ವರ್ಷಕ್ಕೆ ವಿಸ್ತರಣೆ ಸಾಧ್ಯತೆ