ಪ್ರಶಸ್ತಿಗಾಗಿ ಕರೆಸಿ ಜ್ಞಾನಪೀಠ ಕಂಬಾರರಿಗೆ ಕವಿವಿ ಅಪಮಾನ -ಬೆಳಗು ವಿವಾದಿತ ಪಠ್ಯ ಪ್ರಕರಣ, ಪ್ರಶಸ್ತಿ ಮುಂದೂಡಿಕೆ

ಸಾರಾಂಶ

ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ಷುಲ್ಲಕ ಕಾರಣಕ್ಕೋಸ್ಕರ ಪ್ರತಿಷ್ಠಿತ ಅರಿವೇ ಗುರು ಪ್ರಶಸ್ತಿ ಕಾರ್ಯಕ್ರಮ ಮುಂದೂಡಿದ್ದಲ್ಲದೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ। ಚಂದ್ರಶೇಖರ ಕಂಬಾರ ಸೇರಿ ಮೂವರು ಪ್ರಶಸ್ತಿ ಪುರಸ್ಕೃತರಿಗೆ ಅಗೌರವ ತೋರಿರುವ ಘಟನೆ ನಡೆದಿದೆ.

 ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ಷುಲ್ಲಕ ಕಾರಣಕ್ಕೋಸ್ಕರ ಪ್ರತಿಷ್ಠಿತ ಅರಿವೇ ಗುರು ಪ್ರಶಸ್ತಿ ಕಾರ್ಯಕ್ರಮ ಮುಂದೂಡಿದ್ದಲ್ಲದೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ। ಚಂದ್ರಶೇಖರ ಕಂಬಾರ ಸೇರಿ ಮೂವರು ಪ್ರಶಸ್ತಿ ಪುರಸ್ಕೃತರಿಗೆ ಅಗೌರವ ತೋರಿರುವ ಘಟನೆ ನಡೆದಿದೆ.

ಸಾಕಷ್ಟು ಸಂದರ್ಭದಲ್ಲಿ ಪ್ರಶಸ್ತಿ ಕಾರ್ಯಕ್ರಮಗಳನ್ನು ಮುಂದೂಡುವುದು ಸಾಮಾನ್ಯ. ಆದರೆ, ವಿವಾದಿತ ಬೆಳಗು ಪಠ್ಯದ ಲೇಖನವನ್ನು ಕರ್ನಾಟಕ ವಿವಿ ಇತ್ತೀಚೆಗೆ ಕೈ ಬಿಟ್ಟಿದ್ದರೂ, ಕೆಲ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ವಿವಿ ಕೆಲ ಸಂಘಟನೆಗಳ ಒಣ ಪ್ರತಿಷ್ಠೆಯಿಂದಾಗಿ ಬುಧವಾರ ಕರ್ನಾಟಕ ವಿಶ್ವ ವಿದ್ಯಾಲಯ ಸುವರ್ಣ ಮಹೋತ್ಸವ ಭವನದಲ್ಲಿ ನಿಗದಿಯಾಗಿದ್ದ ಅರಿವೇ ಗುರು ಪ್ರಶಸ್ತಿ ಸಮಾರಂಭ ಮುಂದೂಡಬೇಕಾಯಿತು.

ಕರ್ನಾಟಕ ವಿಶ್ವ ವಿದ್ಯಾಲಯ ಕೊಡಮಾಡುವ ಅರಿವೇ ಗುರು 2024ನೇ ಸಾಲಿನ ಪ್ರಶಸ್ತಿಯನ್ನು ಕಲಾ ಕ್ಷೇತ್ರದಿಂದ ಡಾ। ಚಂದ್ರಶೇಖರ ಕಂಬಾರ, ವಿಜ್ಞಾನ ಕ್ಷೇತ್ರದಿಂದ ಡಾ। ವಿ.ಜಿ. ತಳವಾರ ಹಾಗೂ ಕವಿವಿ ಎಮರಿಟೀಸ್ ಪ್ರಾಧ್ಯಾಪಕ ಪ್ರೊ. ಎನ್.ಎಂ.ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ನಿಗದಿಯಂತೆ ಪ್ರಶಸ್ತಿ ಪುರಸ್ಕೃತರು ಸಹ ವಿವಿ ಆವರಣಕ್ಕೆ ಬಂದಿದ್ದರು. ಅವರನ್ನು ಮೆರವಣಿಗೆ ಮೂಲಕ ಸುವರ್ಣ ಮಹೋತ್ಸವ ಭವನಕ್ಕೆ ಕರೆದೊಯ್ಯಲು ಎಲ್ಲ ರೀತಿಯ ಸಿದ್ಧತೆಯೂ ಆಗಿತ್ತು.

ಆದರೆ, ವಿವಾದಿತ ಪಠ್ಯದ ಅಭ್ಯಾಸ ಮಂಡಳಿಯ ಅಧ್ಯಕ್ಷರು ಹಾಗೂ ಕನ್ನಡ ವಿಭಾಗದ ಅಧ್ಯಕ್ಷ ಡಾ। ಕೃಷ್ಣಾ ನಾಯಕ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಗೊಂದಲ ಉಂಟಾಗಲಿದೆ ಎಂದು ಮಂಗಳವಾರ ಸಂಜೆ ಕುಲಸಚಿವರಿಗೆ ಕವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘವು ಪತ್ರದ ಮೂಲಕ ಮನವಿ ಸಲ್ಲಿಸಿದ್ದೇ ದೊಡ್ಡ ಅವಾಂತರಕ್ಕೆ ಕಾರಣವಾಯಿತು.

Share this article