ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಗದ್ದಲ : 34 ಮಂದಿಗೆ ಮುಖ್ಯ ಟೆಸ್ಟ್‌ಗೆ ಅವಕಾಶ

ಸಾರಾಂಶ

ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ - 34 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಕೆಪಿಎಸ್‌ಸಿ ಅವಕಾಶ ಕಲ್ಪಿಸಿದೆ.

ಬೆಂಗಳೂರು : ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷಗಳು ಆಗಿರುವುದರಿಂದ ನ್ಯಾಯ ಒದಗಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ 34 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಕೆಪಿಎಸ್‌ಸಿ ಅವಕಾಶ ಕಲ್ಪಿಸಿದೆ. ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ಎಂ.ಕೃಷ್ಣ ಸೇರಿ 34 ಜನರಿಗೆ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಳಿಕ ಅಂತಿಮ ತೀರ್ಪಿನ ಷರತ್ತುಗಳಿಗೆ ಒಳಪಟ್ಟು ಮುಖ್ಯಪರೀಕ್ಷೆಗೆ ಅವಕಾಶ ಕಲ್ಪಿಸಬಹುದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಲ್ ಟಿಕೆಟ್ ಡೌನ್‌ಲೋಡ್‌: ಮೇ ಮೊದಲ ವಾರದಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕೆಪಿಎಸ್‌ಸಿ ತಿಳಿಸಿದೆ.---

ಪರೀಕ್ಷೆ ಬರೆಯುವುದಿಲ್ಲ: ಅಭ್ಯರ್ಥಿ ಕೃಷ್ಣ

ಸಾವಿರಾರು ಕನ್ನಡ ಮಾಧ್ಯಮ ಅಭ್ಯರ್ಥಿಗಳ ಪರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾಗ ಹೈಕೋರ್ಟ್ ನನಗೆ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿ, ನಾನು ಮುಖ್ಯ ಪರೀಕ್ಷೆ ಬರೆಯುವುದಿಲ್ಲ. ಪರೀಕ್ಷೆ ಬರೆದರೆ ಎಲ್ಲರ ಎದುರು ನಾನು ಸ್ವಾರ್ಥಿ ಎನಿಸಿಕೊಳ್ಳಬೇಕಾಗುತ್ತದೆ ಎಂದು ಕೆಎಎಸ್ ಆಕಾಂಕ್ಷಿ, ಹೈಕೋರ್ಟ್‌ ಅರ್ಜಿದಾರ ಎಂ.ಕೃಷ್ಣ ಹೇಳಿದ್ದಾರೆ.

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ದೋಷದಿಂದ ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸಂಘಟಿತವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನಾನು ಮನವಿ ಸಲ್ಲಿಸದೇ ಇದ್ದರೂ ಹೈಕೋರ್ಟ್ ನನಗೆ ಹಾಗೂ ಅರ್ಜಿ ಸಲ್ಲಿಸಿದ ಇನ್ನುಳಿದವರಿಗೆ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಿದೆ ಕೃಷ್ಣ ತಿಳಿಸಿದರು.

Share this article