ನಕಲಿ ಅಭ್ಯರ್ಥಿಗಳು ಹಾಜರಾಗುವುದನ್ನು ತಪ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಾಂತ್ರಿಕತೆಯ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ ವ್ಯವಸ್ಥೆಯನ್ನು ಶನಿವಾರ ನಡೆದ ವಿಧಾನಪರಿಷತ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಳಸಿದೆ.
ಬೆಂಗಳೂರು : ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ತಾಂತ್ರಿಕತೆಯ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್-ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ಶನಿವಾರ ನಡೆದ ವಿಧಾನಪರಿಷತ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಳಸಿದೆ.
ಪ್ರಾಧಿಕಾರದ ಎಂಜಿನಿಯರಿಂಗ್ ತಂಡ ಸಿದ್ಧಪಡಿಸಿರುವ ಈ ಹೊಸ ವ್ಯವಸ್ಥೆ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ತಪ್ಪಿಸುತ್ತದೆ. ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಇನ್ನಿತರ ಹುದ್ದೆಗಳ ನೇಮಕಕ್ಕೆ ಶನಿವಾರ ನಡೆದ ಪರೀಕ್ಷೆಯಲ್ಲಿ ನೂತನ ವ್ಯವಸ್ಥೆಯನ್ನು ಪ್ರಯೋಗಾರ್ಥವಾಗಿ ಬಳಸಲಾಗಿದೆ. ಪ್ರಥಮ ಪ್ರಯತ್ನ ಯಶಸ್ವಿಯಾಗಿದೆ ಎಂದು ಕೆಇಎ ತಿಳಿಸಿದೆ.
ಹೇಗೆ ಕೆಲಸ ಮಾಡುತ್ತದೆ?: ಪರೀಕ್ಷಾ ಕೊಠಡಿ ಪ್ರವೇಶಿಸುವ ವೇಳೆ ಸ್ಮಾರ್ಟ್‌ಫೋನ್ ಆ್ಯಪ್ ಬಳಸಿ ಅಭ್ಯರ್ಥಿಗಳ ಫೋಟೋ ಸೆರೆ ಹಿಡಿಯಲಾಗುತ್ತದೆ. ಇದು, ತಕ್ಷಣವೇ ಕೆಇಎ ಡೆಟಾ ಸರ್ವರ್‌ನೊಂದಿಗೆ ಸಂಪರ್ಕಗೊಂಡು ಅಭ್ಯರ್ಥಿ ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡಿರುವ ಭಾವಚಿತ್ರದೊಂದಿಗೆ ತಾಳೆ ಮಾಡಿ ನೈಜ್ಯತೆ ದೃಢಪಡಿಸುತ್ತದೆ. ನಕಲಿ ಅಭ್ಯರ್ಥಿಗಳನ್ನು ಈ ಮೂಲಕ ಪತ್ತೆ ಮಾಡಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಶನಿವಾರ 2 ಪತ್ರಿಕೆಗಳಿಗೆ 341ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಮುಂದಿನ ದಿನಗಳಲ್ಲಿ ಇತರ ಪರೀಕ್ಷೆಗಳಿಗೂ ಇದರ ಬಳಕೆಯನ್ನು ವಿಸ್ತರಿಸಲಾಗುವುದು ಎಂದು ಕೆಇಎ ತಿಳಿಸಿದೆ.
ವೆಬ್‌ಸೈಟ್‌ನಲ್ಲಿ ಸಿಗದ ಒಎಂಆರ್ ಶೀಟ್: ಪರೀಕ್ಷೆ ಮುಗಿದ ತಕ್ಷಣ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಕೆಇಎ ತಿಳಿಸಿತ್ತು. ಆದರೆ, ವೆಬ್‌ಸೈಟ್‌ನಲ್ಲಿನ ಲಿಂಕ್ ಕ್ಲಿಕ್ ಮಾಡಿದರೆ ತೆರೆದುಕೊಳ್ಳಲಿಲ್ಲ. ಇನ್‌ವ್ಯಾಲಿಡ್ ಯುಆರ್‌ಎಲ್ ಎಂದು ತೋರಿಸುತ್ತಿತ್ತು. ಒಎಂಆರ್ ಅಪ್‌ಲೋಡ್ ಮಾಡುವುದರಿಂದ ಪಾರದರ್ಶಕತೆ ಇರುತ್ತದೆ. ಒಎಂಆರ್ ಶೀಟ್‌ಗಳನ್ನು ಯಾರು ಬೇಕಾದರೂ ನೋಡಬಹುದು. ಇದರಿಂದ ಅಕ್ರಮ/ಅನುಮಾನಗಳಿಗೆ ಅವಕಾಶವೇ ಇಲ್ಲದಂತಾಗಲಿದೆ ಎಂದು ಕೆಇಎ ತಿಳಿಸಿದೆ.