ಸಾರಾಂಶ
ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ತಡರಾತ್ರಿಯಿಂದ ಶುಕ್ರವಾರದವರೆಗೆ ಭರ್ಜರಿ ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಾಸನ ಜಿಲ್ಲೆಯಲ್ಲಿ ಮನೆಯ ಗೋಡೆ ಕುಸಿದು ಓರ್ವ ವೃದ್ಧೆ ಮತಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಕಳು ಸಾವಿಗೀಡಾಗಿದೆ.
ಬೆಂಗಳೂರು : ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ತಡರಾತ್ರಿಯಿಂದ ಶುಕ್ರವಾರದವರೆಗೆ ಭರ್ಜರಿ ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಾಸನ ಜಿಲ್ಲೆಯಲ್ಲಿ ಮನೆಯ ಗೋಡೆ ಕುಸಿದು ಓರ್ವ ವೃದ್ಧೆ ಮತಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಕಳು ಸಾವಿಗೀಡಾಗಿದೆ. ದಕ್ಷಿಣ ಕನ್ನಡ, ಗದಗ, ವಿಜಯನಗರ, ರಾಯಚೂರು, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಭತ್ತ, ತೊಗರಿ, ಹತ್ತಿ, ಅಡಕೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಹಾಸನ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ
ಹಾಸನ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಅರಕಲಗೂಡು ತಾಲೂಕು ಮತ್ತಿಗೋಡು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಜವರಮ್ಮ (63) ಮೃತಪಟ್ಟಿದ್ದಾರೆ. ಶುಕ್ರವಾರ ಮುಂಜಾನೆ 5.30ಕ್ಕೆ ಮನೆಯಲ್ಲಿ ಮಲಗಿದ್ದಾಗ ಗೋಡೆ ಕುಸಿದು ಬಿದ್ದಿದ್ದು, ಜವರಮ್ಮನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಗಾಳಿ, ಚಂಡಮಾರುತ, ವಾಯುಭಾರ ಕುಸಿತದ ಪರಿಣಾಮ ವಿಪರಿತ ಮಳೆ ಸುರಿಯುತ್ತಿರುವುದರಿಂದ ಅಡಕೆ ಬೆಳೆ, ಮೀನುಗಾರಿಕೆ, ಬತ್ತದ ಬೆಳೆಗೆ ಅಡಚಣೆ ಆಗಿದ್ದು, ರೈತರು, ಮೀನುಗಾರರು ಕಂಗೆಟ್ಟಿದ್ದಾರೆ. ಶುಕ್ರವಾರ ಬಿರುಗಾಳಿಯೂ ಜೋರಾಗಿದ್ದು, ಕಾರವಾರ ತಾಲೂಕಿನ ಅರಗಾ ಬಳಿ ಭಾರಿ ಮರವೊಂದು ಉರುಳಿಬಿದ್ದು, 1 ಆಕಳು ಸಾವಿಗೀಡಾಗಿ ಮತ್ತೊಂದಕ್ಕೆ ಗಂಭೀರ ಗಾಯವಾಗಿದೆ. 5 ಬೈಕ್‌ಗಳು ಜಖಂಗೊಂಡಿವೆ.
ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯನ್ನು ಬೆಳೆಯುವ ರೈತರು ಮತ್ತು ಕರಾವಳಿಯುದ್ದಕ್ಕೂ ಮೀನುಗಾರಿಕೆ ಅವಲಂಬಿಸಿ ಜೀವನ ಸಾಗಿಸುವ ಸಾವಿರಾರು ಕುಟುಂಬಗಳು ಅತಿವೃಷ್ಟಿಗೆ ತುತ್ತಾಗಿವೆ. ಭರಪೂರ ಮೀನು ಸಿಗುವ ಈ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೋಟುಗಳು ಬಂದರುಗಳಲ್ಲಿ ಲಂಗರು ಹಾಕಿವೆ. ಅಲ್ಲದೇ ಬತ್ತದ ಬೆಳೆಗೆ ಆಧಾರವಾಗಬೇಕಿದ್ದ ಮಳೆ ಇಡೀ ಬೆಳೆಯನ್ನೇ ಕಸಿದುಕೊಳ್ಳುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.
ತುಂಗಾ ನದಿ ನೀರಿನ ಮಟ್ಟ ಏರಿಕೆ:
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಾದ್ಯಂತ ಎಡೆಬಿಡದೆ ಮಳೆಯಾಗಿದ್ದು, ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ದೀಪಾವಳಿಯ ಮೂರ್ನಾಲ್ಕು ದಿನಗಳಲ್ಲಿ ಬಿಡುವು ನೀಡದ ಮಳೆ, ಈಗ ಅಡಕೆ ಕೊಯಿಲಿಗೂ ಅಡ್ಡಿಯಾಗಿದೆ. ಅಡಕೆ, ಕಾಳು ಮೆಣಸು, ಕಾಫಿ ಬೆಳೆಗಳಿಗೆ ಕೊಳೆ ರೋಗ ತಗುಲಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ. ಅಳಿದುಳಿದ ಫಸಲುಗಳು ರೈತರ ಕೈಸೇರಲು ಬಿಡದೇ ಅಡ್ಡಿಯಾಗಿದೆ.
ದಕ್ಷಿಣ ಕನ್ನಡಕ್ಕೆ 3 ದಿನ ಅಲರ್ಟ್:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಸಟ್ಟಪುಟ್ಟ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಅ.25 ಮತ್ತು 27 ರಂದು ಯೆಲ್ಲೋ ಅಲರ್ಟ್, ಅ.28ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ಸಹಾಯವಾಣಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅ.25 ಮತ್ತು 26ರಂದು ಗುಡುಗು ಸಿಡಿಲಿನೊಂದಿಗೆ ಭಾರೀ ಗಾಳಿ ಸಮೇತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಿದ್ದು, ಸಹಾಯಕ್ಕಾಗಿ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926 ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸಹಾಯವಾಣಿ 080-28388005 ಸಂಖ್ಯೆಗೆ ಕರೆ ಮಾಡುವಂತ ತಿಳಿಸಿದೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))