ಸತತ ಮಳೆ, ಹೊಲದಲ್ಲಿ ಕೊಳೆಯುತ್ತಿರುವ ಬೆಳೆ

| Published : Oct 25 2025, 01:00 AM IST

ಸಾರಾಂಶ

ಜಿಲ್ಲಾದ್ಯಂತ 1,02,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿರುವುದಾಗಿ ಪ್ರಾಥಮಿಕ ಅಂದಾಜು ಕೃಷಿ ಇಲಾಖೆ ನೀಡಿದೆ.

ಶಿವಕುಮಾರ ಕುಷ್ಟಗಿಗದಗ: ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ರೈತರ ಶ್ರಮದ ಫಲವೇ ಹಾಳಾಗುತ್ತಿದೆ. ಅಕ್ಟೋಬರ್ ಮೊದಲ ವಾರದಿಂದಲೇ ಪ್ರಾರಂಭವಾದ ಅತಿವೃಷ್ಟಿ, ಇದೀಗ ಜಿಲ್ಲಾದ್ಯಂತ ಬೆಳೆಹಾನಿಯ ಆತಂಕವನ್ನು ಹುಟ್ಟಿಸಿದೆ.ಮುಂಗಾರು ಹಂಗಾಮಿನಲ್ಲಿ ರೈತರು ಜಿಲ್ಲೆಯ ರೋಣ, ನರಗುಂದ ಮುಂಡರಗಿ, ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ಗದಗ ತಾಲೂಕುಗಳ ಬಹುಭಾಗದಲ್ಲಿ ಈರುಳ್ಳಿ, ಮೆಣಸಿನಕಾಯಿ, ಹತ್ತಿ, ತೊಗರಿ ಗೋವಿನಜೋಳ ಬಿತ್ತನೆಯಾಗಿದ್ದವು. ಆದರೆ ಕಳೆದ 10- 12 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತು, ಬೆಳೆಗಳು ಕೊಳೆಯುವ ಸ್ಥಿತಿಗೆ ತಲುಪಿವೆ.ಈರುಳ್ಳಿ ನಾಶ: ಹೆಚ್ಚು ಹಾನಿಗೊಳಗಾದ ಬೆಳೆಗಳಲ್ಲಿ ಈರುಳ್ಳಿ ಪ್ರಮುಖವಾಗಿದೆ. ಹಲವೆಡೆ ಹೊಲಗಳಲ್ಲಿ ನೀರು ನಿಂತು ಬೆಳೆ ಹಾಳಾಗಿರುವ ದೃಶ್ಯ ಕಂಡುಬರುತ್ತಿದೆ. ಈರುಳ್ಳಿ ನಾಟಿ ಮಾಡಿರುವ ರೈತರು ಸಾವಿರಾರು ರು. ಖರ್ಚು ಮಾಡಿದ್ದರು. ಈಗ ಬೆಳೆಗೆ ಸೂರ್ಯನ ಕಿರಣ ಸಿಗದೇ ಇರುವುದರಿಂದಾಗಿ ಬುಡ ಕೊಳೆತು ಹೋಗಿವೆ.ಮೆಣಸಿನಕಾಯಿ, ಹತ್ತಿಗೆ ಹಾನಿ: ಮೆಣಸಿನಕಾಯಿ ಹೊಲಗಳಲ್ಲಿ ಕೀಟ, ರೋಗಗಳು ಹೆಚ್ಚಾಗಿದ್ದು, ಹತ್ತಿ ಬೆಳೆಗಳಲ್ಲಿ ಹೂವು ಉದುರುವಿಕೆ ಹಾಗೂ ಕೊಯ್ಲು ಹಂತದ ಹಾನಿ ಸಂಭವಿಸಿದೆ. ಅನೇಕ ರೈತರು ಈಗ ಕೀಟನಾಶಕ ಸ್ಪ್ರೇ ಹಾಕಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ತೊಗರಿ ಹೊಲಗಳಲ್ಲಿ ಎಲೆ ಉದುರುವಿಕೆ ಹಾಗೂ ಬೂದಿರೋಗ ಕಾಣಿಸಿಕೊಂಡಿದ್ದು, ಉತ್ಪಾದನೆ ಪ್ರಮಾಣ ಕುಸಿಯುವ ಆತಂಕವಿದೆ. ಕೆಲವು ಕಡೆ ಪಶು ಆಹಾರವಾದ ಹಸಿರು ಮೇವು ಸಹ ಹಾಳಾಗುತ್ತಿದೆ.1.02 ಲಕ್ಷ ಹೆಕ್ಟೇರ್ ಹಾನಿ: ಜಿಲ್ಲಾದ್ಯಂತ 1,02,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿರುವುದಾಗಿ ಪ್ರಾಥಮಿಕ ಅಂದಾಜು ಕೃಷಿ ಇಲಾಖೆ ನೀಡಿದೆ. ರೋಣ, ನರಗುಂದ ಮತ್ತು ಮುಂಡರಗಿ ತಾಲೂಕುಗಳಲ್ಲಿ ಹಾನಿ ಪ್ರಮಾಣ ಹೆಚ್ಚಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಡಳಿತ ವರದಿ ಸಲ್ಲಿಸಿದೆ. ಆದರೆ ಮತ್ತೆ ನಾಲ್ಕೈದು ದಿನಗಳಿಂದ ಪ್ರಾರಂಭವಾಗಿರುವ ಮಳೆ ಹಾನಿಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ತ್ವರಿತ ಕ್ರಮವಾಗಲಿ: ಮಳೆ ಮುಂದುವರಿಯುತ್ತಿರುವ ಹಿನ್ನೆಲೆ ಬೆಳೆಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಭೀತಿ ಉಂಟಾಗಿದೆ. ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯ ತ್ವರಿತ ಕ್ರಮ ತೆಗೆದುಕೊಂಡು ಹೆಚ್ಚುವರಿ ಪರಿಹಾರವನ್ನು ನೀಡಬೇಕಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನಗೌಡ ಪಾಟೀಲ ತಿಳಿಸಿದರು.

ತುರ್ತು ಪರಿಹಾರ ನೀಡಿ: ಈರುಳ್ಳಿ ನಾಟಿಗೆ ನಾವು ಪ್ರತಿ ಎಕರೆಗೆ ₹50 ಸಾವಿರ ಖರ್ಚು ಮಾಡಿದ್ದೇವೆ. ಈಗ ನೀರು ನಿಂತು ಬೆಳೆ ಸಂಪೂರ್ಣ ಕೊಳೆತು ಹೋಗಿವೆ. ಸರ್ಕಾರದಿಂದ ತುರ್ತು ಪರಿಶೀಲನೆ ಮಾಡಿ ಪರಿಹಾರ ಕೊಡಬೇಕು ಎಂದು ರೈತ ಮಲ್ಲಪ್ಪ ಭಾವಿಮನಿ ತಿಳಿಸಿದರು.