ಮಳೆ ಅಬ್ಬರ: 500 ಎಕರೆ ಭತ್ತದ ಬೆಳೆಗೆ ಹಾನಿ

| Published : Oct 25 2025, 01:00 AM IST

ಸಾರಾಂಶ

ಈ ಬಾರಿ ತಾಲೂಕಿನಲ್ಲಿ ಗುರಿ ಮೀರಿ ಮೆಕ್ಕೆಜೋಳ ಬಿತ್ತನೆಯಾಗಿತ್ತು.

ಹೂವಿನಹಡಗಲಿ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ರೈತಾಪಿ ವರ್ಗ ಅಕ್ಷರಶಃ ಕಂಗಾಲಾಗಿದ್ದಾರೆ. ಕಟಾವಿಗೆ ಬಂದ 500 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕ್ಕೆ ಉದುರಿ ಬಿದ್ದಿದೆ. ಒಣಗಲು ಹಾಕಿದ ಮೆಕ್ಕೆಜೋಳ ಮಳೆ ನೀರಿನಲ್ಲಿ ನೆನೆದು, ಮೊಳಕೆಯೊಡೆದು ಅಪಾರ ಪ್ರಮಾಣದ ಹಾನಿ ಅನುಭವಿಸುತ್ತಿದ್ದಾರೆ.

ಈ ಬಾರಿ ತಾಲೂಕಿನಲ್ಲಿ ಗುರಿ ಮೀರಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಈಗಾಗಲೇ ಸಾಕಷ್ಟು ರೈತರು ಮೆಕ್ಕೆಜೋಳ ಕೊಯ್ಲು ಮಾಡಿ ರಸ್ತೆ ಮೇಲೆ ಒಣಗಲು ಹಾಕಿದ್ದು, ಮಳೆ ನೀರು ನುಗ್ಗಿದ್ದು ಕೆಲವು ಕಡೆಗಳಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಉಳಿದಂತೆ ಮೆಕ್ಕೆಜೋಳ ನೀರಿನಲ್ಲಿ ನೆನೆದ ಪರಿಣಾಮ ಮೊಳಕೆಯೊಡೆದು ದುರ್ನಾತ ಬೀರುತ್ತಿವೆ. ಇದರಿಂದ ರೈತರಿಗೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಬರೆ ಎಳೆದ ಬೆಲೆ ಕುಸಿತ: ತಾಲೂಕಿನ ಎಲ್ಲ ಕಡೆಗೂ ಮೆಕ್ಕೆಜೋಳ ಬಿತ್ತನೆಯಾಗಿದೆ. ನಿರಂತರ ಮಳೆಯಿಂದ ಮೆಕ್ಕೆಜೋಳ ವ್ಯಾಪಾರಸ್ಥರು ಖರೀದಿಗೆ ಬರುತ್ತಿಲ್ಲ. ನಿತ್ಯ ರೈತರು ರಾಶಿ ಒಣಗಿಸಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ₹2400 ಇದ್ದ ಮೆಕ್ಕೆಜೋಳ ಬೆಲೆ ಈಗ ₹1800ಕ್ಕೆ ಕುಸಿದಿದೆ. ಇದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ.

500 ಎಕ್ರೆಗೂ ಹೆಚ್ಚು ಭತ್ತದ ಬೆಳೆ ಹಾನಿ: ತಾಲೂಕಿನ ನದಿ ತೀರದ ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳು, ರಾಜವಾಳ, ನವಲಿ, ಹೊನ್ನೂರು, ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ ಸೇರಿದಂತೆ ಇತರೆ ಕಡೆಗಳಲ್ಲಿ ನಾಟಿ ಮಾಡಿರುವ ಭತ್ತ ಈಗಾಗಲೇ ಕೊಯ್ಲಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಮಳೆ ಗಾಳಿಗೆ ರಭಸಕ್ಕೆ ಭತ್ತದ ಬೆಳೆ ನೆಲಕ್ಕೆ ಬಿದ್ದಿದೆ. ಎಕರೆಯೊಂದಕ್ಕೆ 8-10 ಚೀಲದಷ್ಟು ಕಾಳು ನೆಲದ ಪಾಲಾಗಿದೆ. ಜತೆಗೆ ನೆಲಕ್ಕೆ ಬಿದ್ದಿರುವ ಭತ್ತದ ಬೆಳೆಯನ್ನು ಕೊಯ್ಲು ಮಾಡಲು ರೈತರು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ.

ಕುಸಿದು ಬಿದ್ದ 5 ಮನೆಗಳು: ತಾಲೂಕಿನ ಮಾನ್ಯರ ಮಸಲವಾಡ, ಕಾಗನೂರು, ಹಕ್ಕಂಡಿ, ಹಿರೇಹಡಗಲಿ ಸೇರಿದಂತೆ ಒಟ್ಟು 5 ಮಣ್ಣಿನ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮಳೆಯ ಅಬ್ಬರಕ್ಕೆ ಹಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ಪಕ್ಕದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆ ಹಾನಿಯಾಗಿದೆ.

ತಾಲೂಕಿನಲ್ಲಿ ಸುರಿದ ಮಳೆಗೆ 2 ದಿನಗಳಲ್ಲಿ 5 ಮಣ್ಣಿನ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ, ಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ವರದಿ ನೀಡಲು ಸೂಚಿಸಲಾಗಿದೆ ಎನ್ನುತ್ತಾರೆ ತಹಸೀಲ್ದಾರ್‌ ಜಿ.ಸಂತೋಷಕುಮಾರ.

ಮಕರಬ್ಬಿ ಗ್ರಾಪಂ ವ್ಯಾಪ್ತಿಯ ಬನ್ನಿಮಟ್ಟಿ ಸೇರಿದಂತೆ ಇತರೆ ಕಡೆಗಳಲ್ಲಿ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕೆ ಬಿದ್ದು ಅಪಾರ ಪ್ರಮಾಣದ ಭತ್ತದ ಕಾಳು ನೆಲಕ್ಕೆ ಬಿದ್ದಿವೆ. ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದೇವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ರೈತ ಬಸವರಾಜ ಹಣ್ಣಿಗೇರಿ.