5 ವರ್ಷದ ಬಳಿಕ ಕೆಂಪೇಗೌಡ ಜಯಂತಿ - ಬಿಬಿಎಂಪಿ ಅಧಿಕಾರಿಗಳಿಂದ ಸಕಲ ಸಿದ್ಧತೆ

Published : Jun 15, 2025, 05:26 AM IST
kempegowda statue

ಸಾರಾಂಶ

5 ವರ್ಷದ ಬಳಿಕ ಕೆಂಪೇಗೌಡ ಜಯಂತಿ - ಬಿಬಿಎಂಪಿ ಅಧಿಕಾರಿಗಳಿಂದ ಸಕಲ ಸಿದ್ಧತೆ । ಜೂ.27ಕ್ಕೆ ಟೌನ್‌ಹಾಲ್‌ನಲ್ಲಿ ಅದ್ಧೂರಿ ಸಮಾರಂಭ । ಕೆಂಪೇಗೌಡ ಪ್ರಶಸ್ತಿ ಪ್ರದಾನದ ಬಗ್ಗೆ ಸ್ಪಷ್ಟತೆ ಇಲ್ಲ

ಬೆಂಗಳೂರು : ಬರೋಬ್ಬರಿ 5 ವರ್ಷದ ಬಳಿಕ ಬಿಬಿಎಂಪಿಯಿಂದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಸಮಾರಂಭವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಸಾಧಕರಿಗೆ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರವಾಗಿಲ್ಲ.

ಚುನಾಯಿತ ಪ್ರತಿನಿಧಿಗಳ ಅಧಿಕಾರ ಮುಕ್ತಾಯಗೊಂಡ 5 ವರ್ಷದ ಬಳಿಕ ಅದ್ಧೂರಿಯಾಗಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಪಾಲಿಕೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿರುವುದರಿಂದ ಮುಖ್ಯ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

2020ರಲ್ಲಿ ಬಿಬಿಎಂಪಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಿ ವಿವಿಧ ಕ್ಷೇತ್ರದ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆ ಬಳಿಕ ಕೊರೋನಾ ಕಾರಣದಿಂದ ಜಯಂತಿ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಕೈಬಿಡಲಾಗಿತ್ತು. ನಂತರದ ವರ್ಷಗಳಲ್ಲಿ ಜೂ.27ರ ಕೆಂಪೇಗೌಡರ ಜನ್ಮದಿನದಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿತ್ತು.

120 ಸಾಧಕರಿಗೆ ಪ್ರಶಸ್ತಿ ನೀಡಲಿಲ್ಲ:

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ಸರ್ಕಾರವು ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಆರಂಭಿಸುವುದಾಗಿ ಹೇಳಲಾಗಿತ್ತು. 2023-24ರಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯನ್ನೂ ರಚನೆ ಮಾಡಲಾಗಿತ್ತು. ಆಗ ವಿವಿಧ ಕ್ಷೇತ್ರದ ಸುಮಾರು 800 ರಿಂದ 900 ಸಾಧಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಮಾರು 120 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಅದ್ಧೂರಿ ಆಚರಣೆ ಮಾಡದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ.

ಕ್ರೀಡಾಕೂಟ ಆಯೋಜನೆ:

ಈ ಬಾರಿ ಸರ್ಕಾರವೇ ಜೂ.27ರಂದು ನಗರ ಟೌನ್‌ ಹಾಲ್‌ನಲ್ಲಿ ಅದ್ಧೂರಿ ಸಮಾರಂಭ ಆಯೋಜನೆಗೆ ಸೂಚನೆ ನೀಡಿದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕಾರ್ಯಕ್ರಮದ ಭರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ, ಬಿಬಿಎಂಪಿಯ ಅಧಿಕಾರಿ ನೌಕರರಿಗೆ ಕ್ರೀಡಾಕೂಟ ಸಹ ಆಯೋಜನೆ ಮಾಡಲಾಗಿದೆ.

ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಆಗಿಲ್ಲ: ಪ್ರದಾನ ಅನುಮಾನ

ರಾಜ್ಯ ಸರ್ಕಾರ ಈ ಬಾರಿ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಅದ್ಧೂರಿ ಆಚರಣೆಗೆ ನಿರ್ದೇಶನ ನೀಡಿದೆ. ಆದರೆ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಸಮಿತಿ ಮಾತ್ರ ರಚನೆ ಮಾಡಿಲ್ಲ. ಜಯಂತಿ ಆಚರಣೆಗೆ ಕೇವಲ 12 ದಿನ ಬಾಕಿ ಇದೆ. ಸಮಿತಿ ರಚನೆಯಾದರೆ ಮತ್ತಷ್ಟು ಮಂದಿ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಈ ಬಾರಿಯೂ ಪ್ರಶಸ್ತಿ ನೀಡುವುದು ಅನುಮಾನವಾಗಿದೆ ಎನ್ನಲಾಗಿದೆ.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು