ರಾಮನಗರ ಹೆಸರು ಬದಲಾವಣೆಯನ್ನು ಹೇಗೆ ಮಾಡಬೇಕು ಅಂತಾ ನನಗೆ ಗೊತ್ತು. ಅದನ್ನು ಮಾಡೇ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಡುಗಿದ್ದಾರೆ.
ಮೈಸೂರು : ರಾಮನಗರ ಹೆಸರು ಬದಲಾವಣೆಯನ್ನು ಹೇಗೆ ಮಾಡಬೇಕು ಅಂತಾ ನನಗೆ ಗೊತ್ತು. ಅದನ್ನು ಮಾಡೇ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಡುಗಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನು ಹೊರಗಿನಿಂದ ಬಂದವನಲ್ಲ. ನಮ್ಮ ಭೂಮಿ ನಮ್ಮ ನೆಲದ ಬಗ್ಗೆ ನಮಗೆ ಗೊತ್ತು. ಯಾರೂ ಅಪ್ಪ ಅಮ್ಮನ ಹೆಸರು ಬದಲಾಯಿಸಲ್ಲ. ಅಫಿಡೆವಿಟ್ ಮಾಡಿಸಿಕೊಳ್ಳಬಹುದು ಅಷ್ಟೇ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಮಾಡೇ ಮಾಡುತ್ತೇವೆ
ಟೌನ್ ಶಿಪ್ ಪಿತಾಮಹ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಯಾರು ಏನೇ ಹೇಳಿದರೂ ಗ್ರೇಟರ್ ಬೆಂಗಳೂರು ಮಾಡೇ ಮಾಡುತ್ತೇವೆ. ಬೆಂಗಳೂರಿಗಿಂತ ಚೆನ್ನಾಗಿ 10 ಸಾವಿರ ಎಕರೆಯಲ್ಲಿ ಉತ್ತಮ ಸಿಟಿ ನಿರ್ಮಾಣ ಮಾಡುತ್ತೇವೆ. ಇದು ಮಾದರಿ ನಗರವಾಗಿರುತ್ತದೆ ಎಂದು ಶಿವಕುಮಾರ್ ಹೇಳಿದರು.
ಬಿಡದಿ ಟೌನ್‌ಶಿಪ್‌ಗೆ ರೈತರು ಭೂಮಿ ಕೊಡದಂತೆ - ಯೋಜನೆ ಕೈಬಿಡುವಂತೆ ದೇವೇಗೌಡರು ಸಿಎಂಗೆ ಪತ್ರ ಬರೆದಿದ್ದಾರೆ. ಆದರೆ ಒಟ್ಟು 7 ಟೌನ್‌ಶಿಪ್ ಮಾಡಲು ಕುಮಾರಸ್ವಾಮಿ ಕಾಲದಲ್ಲಿಯೇ ತೀರ್ಮಾನ ಆಗಿತ್ತು. ಅದಕ್ಕಾಗಿ 300 ಕೋಟಿ ಹಣ ಕೊಟ್ಟಿದ್ದರು. ನಾನು ಡಿನೋಟಿಫಿಕೇಷನ್ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು.
ರೈತರು ಜಮೀನಿನ ಬದಲಾಗಿ ದುಡ್ಡು ತೆಗೆದುಕೊಳ್ಳಬಹುದು. ಇಲ್ಲವಾದರೆ ಅಭಿವೃದ್ಧಿಪಡಿಸಿದ ಭೂಮಿ ತೆಗೆದುಕೊಳ್ಳಬಹುದು. ಎರಡು ಬಾರಿ ಕುಮಾರಸ್ವಾಮಿ ಸಿಎಂ ಆದರೂ ಯಾಕೆ ರೈತರ ಭೂಮಿ ಸ್ವಾಧೀನದಿಂದ ಕೈ ಬಿಡಲಿಲ್ಲ. ಈ ಬಗ್ಗೆ ದೇವೇಗೌಡರೇ ಹೇಳಲಿ. ಇದರಲ್ಲಿ ರಾಜಕೀಯ ಬೇಡ. ಇದೆಲ್ಲ ನಿಮ್ಮ ಮಗನೆ ಮಾಡಿದ್ದು, ನಿಮ್ಮ ಕಾಲದಲ್ಲೇ ಆಗಿದ್ದು ಎಂದು ಅವರು ತಿರುಗೇಟು ನೀಡಿದರು.