;Resize=(412,232))
ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್‌ನ ವಿನೂತನ ಪ್ಯಾಕ್ ಸೇರಿ ಸೌಂದರ್ಯ ವರ್ಧಕ, ಗೃಹ ಬಳಕೆಯ 57 ಉತ್ಪನ್ನಗಳನ್ನು ಪ್ರಚಾರ ರಾಯಭಾರಿಯಾಗಿರುವ ನಟಿ ತಮನ್ನಾ ಭಾಟಿಯಾ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಹೊಸ ರೂಪ ಬಿಡುಗಡೆ ಮಾಡಲಾಯಿತು. ಅದರೊಂದಿಗೆ ಸುಗಂಧ ದ್ರವ್ಯ, ಡಿಶ್ ಬಾರ್, ಫ್ಲೋರ್ ಕ್ಲೀನರ್, ಫ್ಯಾಬ್ರಿಕ್ ಕಂಡೀಷನರ್, ಟೂಥ್‌ಪೇಸ್ಟ್, ತೆಂಗಿನ ಎಣ್ಣೆ ಸೇರಿ ವಿವಿಧ ನೂತನ 57 ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಕೆಎಸ್‌ಡಿಎಲ್ ಸದ್ಯ ಶ್ರೀಗಂಧ ಸೋಪು ಉತ್ಪಾದನೆ ಮಾಡುತ್ತಿದೆ. ಅದರ ಜತೆಗೆ ಮಲ್ಲಿಗೆ (ಜಾಸ್ಮಿನ್) ಪರಿಮಳದ ಐಷಾರಾಮಿ ಸೋಪು ತಯಾರಿಸಲಾಗುತ್ತಿದೆ. ಮಲ್ಲಿಗೆ ತೈಲ ಲೀ.ಗೆ 4 ಲಕ್ಷ ರು.ಗೂ ಹೆಚ್ಚಿನ ಬೆಲೆಯಿದೆ. ಹೀಗಾಗಿ ಒಂದು ಸೋಪಿಗೆ 400 ರು. ನಿಗದಿ ಮಾಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಯೂರೋಪ್ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ಮಲ್ಲಿಗೆ ಸುವಾಸನೆಯ ಸೋಪುಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಆ ದೃಷ್ಟಿಯನ್ನಿಟ್ಟುಕೊಂಡು ತಯಾರಿಸಲಾಗುತ್ತಿದೆ. ಹಾಗೆಯೇ, ಕನೌಜ್ ಮತ್ತು ಕೊಯಮತ್ತೂರಿನ ಸುಗಂಧ ದ್ರವ್ಯ ತಯಾರಿಕಾ ಸಂಸ್ಥೆಗಳ ಮೂಲಕ ಕೆಎಸ್‌ಡಿಎಲ್‌ನ ಸುಗಂಧ ದ್ರವ್ಯ ಸಿದ್ಧಪಡಿಸಲಾಗುತ್ತಿದೆ. ಒಟ್ಟಾರೆ ಸಂಸ್ಥೆಯ ಉತ್ಪನ್ನಗಳು 36ರಿಂದ 93ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ಸಿ.ಎಸ್.ನಾಡಗೌಡ ಮಾತನಾಡಿ, ಕೆಎಸ್‌ಡಿಎಲ್‌ನ ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ ಸಂಸ್ಥೆಯ ವಹಿವಾಟು ಪ್ರಸಕ್ತ ಸಾಲಿನಲ್ಲಿ 2 ಸಾವಿರ ಕೋಟಿ ರು.ಗೆ ಮುಟ್ಟಲಿದೆ. ಲಾಭವು 500 ಕೋಟಿ ರು. ದಾಟಲಿದೆ. ಅದಕ್ಕಾಗಿ ಆಧುನಿಕ ಮತ್ತು ವಿನೂತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ 3 ಕೋಟಿ ಹಿಂಬಾಲಕರಿರುವ ಮತ್ತು ದೇಶಾದ್ಯಂತ ಹೆಸರಾಗಿರುವ ಬಹುಭಾಷಾ ನಟಿ ತಮನ್ನಾರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆ. ಮುಂದಿನ ಎರಡು ವರ್ಷ ತಮನ್ನಾ ಅವರು ಬೇರೆ ಯಾವುದೇ ಉತ್ಪನ್ನಗಳ ಪ್ರಚಾರ ಮಾಡದೆ ಕೆಎಸ್‌ಡಿಎಲ್ ಉತ್ಪನ್ನಗಳ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದರು.
ಕೆಎಸ್‌ಡಿಎಲ್‌ನ ಮಾರುಕಟ್ಟೆ ವಿಸ್ತರಣೆ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ. ಈವರೆಗೆ ಮಾಡರ್ನ್ ಟ್ರೇಡ್‌ನ 6 ಡಿಸ್ಟ್ರಿಬ್ಯೂಟರ್‌ಗಳ ಸಂಖ್ಯೆ 64ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮೆರಿಟ್ ಆಧಾರದಲ್ಲಿ 1 ಸಾವಿರಕ್ಕೂ ಹೆಚ್ಚಿನ ಹಂಚಿಕೆದಾರರನ್ನು ನೇಮಿಸಲಾಗಿದೆ. 2022-23ರಲ್ಲಿ 160 ಕೋಟಿ ರು.ಗಳಷ್ಟಿದ್ದ ಮಾಡರ್ನ್ ಟ್ರೇಡ್ ಈಗ 500 ಕೋಟಿ ರು. ದಾಟಿದೆ. ಮಾರ್ಚ್ ಅಂತ್ಯಕ್ಕೆ ಅದು 550 ಕೋಟಿ ರು. ಮೀರುವ ನಿರೀಕ್ಷೆಯಿದೆ. 2022-23ರಲ್ಲಿ 22 ಕೋಟಿ ರು. ಇದ್ದ ಇ-ಕಾಮರ್ಸ್ ಪ್ರಮಾಣ ಈಗ 100 ಕೋಟಿ ರು. ದಾಟಿದೆ ಎಂದು ವಿವರಿಸಿದರು.