ಬಂಗಾರಿ ಜತೆ ಸಹವಾಸ : ಕುಲಕರ್ಣಿಗೆ ಬಂಧನ ಭೀತಿ

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಹೇಳಿಕೊಂಡು ಐಶ್ವರ್ಯಗೌಡ ಎಂಬಾಕೆ ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ವಿನಯ್‌ ಕುಲಕರ್ಣಿಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಇದೀಗ ಬಂಧನ ಭೀತಿ ಶುರುವಾಗಿದೆ.

ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಹೇಳಿಕೊಂಡು ಐಶ್ವರ್ಯಗೌಡ ಎಂಬಾಕೆ ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ವಿನಯ್‌ ಕುಲಕರ್ಣಿಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಇದೀಗ ಬಂಧನ ಭೀತಿ ಶುರುವಾಗಿದೆ.

ಮಂಡ್ಯ ಮತ್ತು ಬೆಂಗಳೂರಿನಲ್ಲಿರುವ ಐಶ್ವರ್ಯಗೌಡ ಹಾಗೂ ವಿನಯ್‌ ಕುಲಕರ್ಣಿಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದರು. ಶುಕ್ರವಾರವೂ ವಿನಯ್‌ ಕುಲಕರ್ಣಿ ಅವರ ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು. ಮಧ್ಯಾಹ್ನದವರೆಗೆ ಇ.ಡಿ. ಅಧಿಕಾರಿಗಳಿಗೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಕೆಲವೊಂದನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದು ತೆರಳಿದ್ದು, ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ದಾಖಲೆಗಳಲ್ಲಿನ ಮತ್ತಷ್ಟು ಮಾಹಿತಿ ಪರಿಶೀಲಿಸಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ವಿನಯ್‌ ಕುಲಕರ್ಣಿ ಮತ್ತು ಐಶ್ವರ್ಯಗೌಡ ನಡುವೆ ವ್ಯವಹಾರ ನಡೆದಿರುವ ದಾಖಲೆಗಳು ಇ.ಡಿ.ಗೆ ಲಭ್ಯವಾಗಿವೆ. ಜತೆಗೆ ಬೇನಾಮಿ ವ್ಯಾಪಾರ ವಹಿವಾಟು ನಡೆಸಿರುವುದನ್ನು ಇ.ಡಿ. ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ವಿನಯ್‌ ಕುಲಕರ್ಣಿಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗಿದೆ.

ಐಶ್ವರ್ಯಗೌಡ ಪತಿ ಹರೀಶ್ ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್‌ ಕಾರನ್ನು ವಿನಯ್ ಕುಲಕರ್ಣಿ ಬಳಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿತ್ತು. ಈ ಸಂಬಂಧ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಐಶ್ವರ್ಯಗೌಡ ಮತ್ತು ವಿನಯ್‌ ಕುಲಕರ್ಣಿ ನಡುವಿನ ವ್ಯವಹಾರದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯ ಇರುವ ಕಾರಣ ಬಂಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಚಿನ್ನ ಖರೀದಿಸುವ ನೆಪದಲ್ಲಿ ಡಿ.ಕೆ.ಸುರೇಶ್ ಹೆಸರು ಹೇಳಿಕೊಂಡು ಐಶ್ವರ್ಯ 9.82 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನ ವಂಚನೆ ಎಸಗಿದ್ದು, ಈ ಬಗ್ಗೆ ವನಿತಾ ಎಸ್.ಐತಾಳ್ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಡಿ.ಕೆ.ಸುರೇಶ್ ಸಹ ದೂರು ಕೊಟ್ಟಿದ್ದರು. ಕೋಟ್ಯಂತರ ರು. ವಹಿವಾಟು ನಡೆದ ಕಾರಣ ಇ.ಡಿ. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಐಶ್ವರ್ಯಗೌಡ ಮತ್ತು ಆಕೆಯ ಪತಿಗೆ ಸೇರಿದ್ದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಐಷಾರಾಮಿ ಕಾರುಗಳು ಪತ್ತೆಯಾಗಿದ್ದವು. ಒಂದೊಂದಾಗಿ ಜಪ್ತಿ ಮಾಡುವ ವೇಳೆ ಬೆನ್ಜ್‌ ಕಾರು ವಿನಯ್ ಕುಲಕರ್ಣಿ ಬಳಿ ಇರುವುದು ಪತ್ತೆಯಾಯಿತು. ಇದರ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಂಡಾಗ ವ್ಯವಹಾರ ಬಯಲಾಗಿದೆ ಎಂದು ತಿಳಿದುಬಂದಿದೆ.

ಇ.ಡಿ. ವಶಕ್ಕೆ:  ಈ ನಡುವೆ, ಇ.ಡಿ. ಅಧಿಕಾರಿಗಳ ಬಂಧನಕ್ಕೊಳಗಾಗಿರುವ ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಗೌಡಳನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗಾಗಿ 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಅಧಿಕಾರಿಗಳು ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು ಇ.ಡಿ. ವಶಕ್ಕೆ ಒಪ್ಪಿಸಿದೆ.

Share this article