ಆ.6ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ : ಅರಳಲಿದೆ ಕನ್ನಡದ ಗಂಗರ ಇತಿಹಾಸ

Published : Aug 04, 2026, 06:59 AM IST
Lalbagh Flower Show

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸದ ಅಂಗವಾಗಿ ಆ.6ರಿಂದ 17ರವರೆಗೆ ಕರ್ನಾಟಕದ ಮೊದಲ ರಾಜಮನೆತನಗಳಲ್ಲಿ ಒಂದಾದ ಗಂಗರ ವಿಷಯಾಧಾರಿತ 220ನೇ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಆಯೋಜಿಸಿದೆ.

   ಬೆಂಗಳೂರು :  ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸದ ಅಂಗವಾಗಿ ಆ.6ರಿಂದ 17ರವರೆಗೆ ಕರ್ನಾಟಕದ ಮೊದಲ ರಾಜಮನೆತನಗಳಲ್ಲಿ ಒಂದಾದ ಗಂಗರ ವಿಷಯಾಧಾರಿತ 220ನೇ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಆಯೋಜಿಸಿದೆ.

ಲಾಲ್‌ಬಾಗ್‌ ಗಾಜಿನ ಮನೆಯ ಒಳಾಂಗಣದಲ್ಲಿ ನಿರ್ಮಿಸಿರುವ ಬೇಗೂರು ದೇವಾಲಯದ ಪುಷ್ಪ ಮಾದರಿ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ. 1200 ವರ್ಷಗಳಿಗಿಂತಲೂ ಹಳೆಯದಾದ ಪಂಚಲಿಂಗೇಶ್ವರ ದೇವಾಲಯದ ಪ್ರತಿರೂಪವನ್ನು 50 ಅಡಿ ಉದ್ದ, 24 ಅಡಿ ಅಗಲ ಹಾಗೂ 26 ಅಡಿ ಎತ್ತರದಲ್ಲಿ ಪುಷ್ಪಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವುದು ವಿಶೇಷ. ಅದಕ್ಕಾಗಿ ಒಂದು ಬಾರಿಗೆ 2.15 ಲಕ್ಷ ಶ್ವೇತ, ಹಳದಿ, ಪಿಂಕ್‌ ಮತ್ತು ರಸ್ಟ್‌ ವರ್ಣಗಳ ಸೇವಂತಿಗೆ ಹೂಗಳು ಮತ್ತು 90 ಸಾವಿರ ಕೆಂಪು ಮತ್ತು ಕಿತ್ತಳೆ ವರ್ಣದ ಆಕರ್ಷಕ ಗುಲಾಬಿ ಹೂವುಗಳು ಸೇರಿ ಒಟ್ಟಾರೆ 3.05 ಲಕ್ಷ ಹೂವುಗಳನ್ನು ಬಳಸಲಾಗುತ್ತಿದೆ. ಎರಡನೇ ಬಾರಿಗೆ ಅಷ್ಟೇ ಪ್ರಮಾಣದ ಹೂವುಗಳನ್ನು ಬಳಸುತ್ತಿದ್ದು ಒಟ್ಟು 12 ದಿನಗಳಲ್ಲಿ 6.01 ಲಕ್ಷ ಹೂವುಗಳನ್ನು ಬಳಕೆ ಮಾಡಲಾಗುತ್ತಿದೆ.

ಹಾಗೆಯೇ 25 ಸಾವಿರ ವೈವಿದ್ಯಮಯವಾದ ಗ್ರೀಲ್‌ ಪೋಲಿಯೇಜ್‌ಗಳನ್ನು ಪರಿಕಲ್ಪನೆಯ ಪೀಠದ ಭಾಗದಲ್ಲಿ ಬಳಸಲಾಗುತ್ತಿದೆ. ಈ ಪುಷ್ಪ ಪ್ರತಿರೂಪಕ್ಕಾಗಿ 20 ಸಾವಿರ ಫ್ಲೋರಲ್‌ ಫೋಮ್ಸ್‌ಗಳು ಮತ್ತು 900 ಕಿಲೋಗ್ರಾಂ ವೈರ್‌ಮೆಷ್‌ ಬಳಸಲಾಗುತ್ತಿದೆ. ಅದಕ್ಕಾಗಿ 10 ದಿನಗಳು ಸತತವಾಗಿ 12 ಜನ ನುರಿತ ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. 90 ಜನ ನುರಿತ ಹೂ ಜೋಡಣೆಗಾರರು 3 ದಿನಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ. ಪ್ರದರ್ಶನದ ಅವಧಿಯಲ್ಲಿ ಒಟ್ಟಾರೆ 2 ಬಾರಿ ಹೂಗಳನ್ನು ಬದಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕೇಂದ್ರ ಭಾಗದ ದೇವಾಲಯದ ಪುಷ್ಪ ಮಾದರಿಯ ಮುಂಭಾಗ 63 ವರ್ಷಗಳ ಸುದೀರ್ಘ ಕಾಲ ರಾಜ್ಯಭಾರ ಮಾಡಿದ ಗಂಗ ವಂಶದ ಪ್ರಸಿದ್ಧ ದೊರೆ ಶ್ರೀಪುರುಷನ 6 ಅಡಿ ಎತ್ತರದ ಶಿಲ್ಪವನ್ನು ಸುಮಾರು 10 ಅಡಿ ಎತ್ತರದ ಆನೆಯ ಶಿಲ್ಪದೊಂದಿಗೆ ಸಂಯೋಜಿಸಿ ಪ್ರದರ್ಶಿಸಲಾಗುತ್ತಿದೆ. ಬೆಂಗಳೂರಿನ ಯುವ ಕಲಾವಿದ ಮಹದೇವ್‌ ಎಂಬುವರು ನಿರ್ಮಿಸಿದ್ದಾರೆ.

ಗಾಜಿನ ಮನೆಯ ಕೇಂದ್ರ ಭಾಗದ ಮುಂಭಾಗದಲ್ಲಿ ಇಂಡೋ ಅಮೇರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಆಕರ್ಷಕ ಹೂ ಜೋಡಣೆ ಇರಲಿದೆ. ಆಕರ್ಷಕ ಕ್ಯಾಲಿಬ್ರೋಚಿ, ಜಿರೇನಿಯಂಗಳು, ಇಂಪೇಷನ್ಸ್‌, ಆಂಥೋರಿಯಂಗಳು, ಗಾರಿವಿನಿಯಾ, ಜೆರ್‌ಬೆರಾ, ವಿವಿದ ಪೋಲಿಯೇಜ್‌ ಗಿಡಗಳ ಜೋಡಣೆ ಇರಲಿದೆ. ಒಟ್ಟಾರೆ 2.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಾಗುತ್ತಿದೆ. ಕೇಂದ್ರ ಕಲಾಕೃತಿಯ ನಾಲ್ಕು ಮೂಲೆಗಳಲ್ಲಿ ಗಂಗವಂಶದ ಪ್ರಮುಖ ರಾಜರಾದ ಕೊಂಗಣಿವರ್ಮ, ತಡಂಗಾಲ, ಮಾಧವ ಮತ್ತು ಅವಿನೀತ ಹಾಗೂ ಗಂಗ ಸಾಮ್ರಾಜ್ಯದ ಬೆನ್ನೆಲುಬಾಗಿದ್ದ ಚಾವುಂಡರಾಯನು ನಿಂತಿರುವ ಪ್ರತಿಮೆಗಳಣ್ನು ಪ್ರದರ್ಶಿಸಲಾಗುವುದು.

ಬಸದಿಯ ಪ್ರತಿಕೃತಿ:

ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ ನಿರ್ಮಾಣಗೊಂಡಿರುವ 1000 ವರ್ಷಗಳಷ್ಟು ಹಳೆಯದಾದ ಬಸದಿಯ ಪ್ರತಿಕೃತಿ ಮತ್ತೊಂದು ಆಕರ್ಷಣೆ. ಬಸದಿಯ ಆಕರ್ಷಕ ವಾಸ್ತು ಶಿಲ್ಪವು 22 ಅಡಿ ಉದ್ದ, 12 ಅಡಿ ಅಗಲ ಹಾಗೂ 18 ಅಡಿ ಎತ್ತರದ ಬಸದಿಯ ಪ್ರತಿರೂಪ ಮೂಡಿಬರಲಿದೆ. ಬಸದಿಯ ಪ್ರತಿರೂಪವನ್ನು ಫ್ಯಾಬ್ರಿಕೇಷನ್‌ನಿಂದ ಭದ್ರಪಡಿಸಿ ಥರ್ಮೊಕೂಲ್‌ ಇತ್ಯಾದಿ ವಸ್ತುಗಳಿಂದ ಆಕರ್ಷಕ ರೂಪ ನೀಡಲಾಗಿದೆ. ಪ್ರತಿರೂಪದ ಆಯ್ದ 20 ಸ್ಥಳಗಳಲ್ಲಿ ವಿಶೇಷ ಹೂಗಳ ಜೋಡಣೆ ಇರಲಿದೆ.

ಇದರಲ್ಲಿ ಪ್ರೊಟೀಯಾಸ್‌, ಬ್ರಾಸಿಕಾ, ಯುಸ್ಟೋಮಾ, ಸ್ಪ್ರೇ-ರೋಜಸ್‌, ಸ್ಪ್ರೇ ಕಾರ್ನೇಷನ್ಸ್‌, ಆಂಥೋರಿಯಂ, ಲಿಲಿಯಾಮ್ಸ್‌, ಡೆಂಡ್ರೋಬಿಯಂ, ಮೊಕಾರಾ ಆರ್ಕಿಡ್ಸ್‌ ಸೇರಿದಂತೆ ವಿವಿಧ ಹೂವುಗಳನ್ನು ಬಳಸಲಾಗುತ್ತಿದೆ. ಹಾಲೆಂಡ್‌, ಥಾಯಲ್ಯಾಂಡ್‌, ಸಿಂಬಿಡಿಯಾ, ಕೀನ್ಯಾ ದೇಶಗಳಿಂದ ಹೂವುಗಳನ್ನು ತರಲಾಗುತ್ತಿದೆ.

ಬಾಹುಬಲಿ ಶಿಲ್ಪ ಪ್ರದರ್ಶನ:

ಗಾಜಿನ ಮನೆಯ ಕೇಂದ್ರ ಭಾಗದ ಎಡಬದಿಯಲ್ಲಿ ವರ್ಟಿಕಲ್‌ ಗಾರ್ಡನ್‌ನೊಂದಿಗೆ ಗಂಗರ ಕಾಲದ ಶಿಲ್ಪಕಲೆಯ ಅದ್ಬುತವೆನಿಸಿರುವ ಬಾಹುಬಲಿ ಶಿಲ್ಪ ಮತ್ತು ಬಾಹುಬಲಿ ಮೂರ್ತಿ ರೂಪುಗೊಂಡ ಕಲ್ಪಿತ ಚಿತ್ರಣದ ಅನಾವರಣಗೊಳ್ಳಲಿದೆ. 12 ಅಡಿ ಅಗಲ, 8 ಅಡಿ ಎತ್ತರದ ಆಕರ್ಷಕ ವರ್ಟಿಕಲ್‌ ಗಾರ್ಡನ್‌ ಮಾದರಿ ಮಂಟಪ ಹಾಗೂ 14 ಅಡಿ ಅಗಲ ಮತ್ತು 18 ಅಡಿ ಉದ್ದದ ವರ್ಟಿಕಲ್‌ ಗಾರ್ಡನ್‌ ರೂಫ್‌ಟಾಪ್‌ ಮೇಲೆ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ ಪ್ರದರ್ಶನಗೊಳ್ಳಲಿದೆ. ಗಾಜಿನ ಮನೆಯ ಒಳಾಂಗಣದಲ್ಲಿ ಗಂಗವಂಶದ ರಾಜಲಾಂಛನದೊಂದಿಗೆ ಗಂಗ ಅರಸರ ಎದೆ ಮಟ್ಟದ ಪ್ರತಿಮೆಗಳು, ಎರಡು ಪ್ರಮುಖ ಶಾಸನಗಳ ಪ್ರತಿಕೃತಿಗಳು, ನೇಗಿಲು ಮತ್ತು ರಾಶಿಪೂಜೆ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಶಾಲಾ ಮಕ್ಕಳಿಗೆ ಉಚಿತ:

ಪ್ರದರ್ಶನ ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರು. 12 ವರ್ಷದೊಳಗೆ ಮಕ್ಕಳಿಗೆ 30 ರು. ನಿಗದಿಪಡಿಸಲಾಗಿದೆ. ರಜಾ ದಿನಗಳಲ್ಲಿ ವಯಸ್ಕರಿಗೆ 100 ರು.ಇರಲಿದೆ. ಶಾಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಆಗಮಿಸಿದರೆ ಉಚಿತ ಪ್ರವೇಶ ಇರಲಿದೆ. ಆನ್‌ಲೈನ್‌ ಮೂಲಕವೂ ಟಿಕೆಟ್‌ ಪಡೆಯಬಹುದಾಗಿದೆ. ವೆಬ್‌ಸೈಟ್‌: https://hasiru.karnataka.gov.in/floweshow/login.aspz ಭೇಟಿ ನೀಡಿ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ಆ.6ಕ್ಕೆ ಉದ್ಘಾಟನೆ:

ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆ.6ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಪಾಲ್ಗೊಳ್ಳುವರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪೀಣ್ಯ ಫ್ಲೈ ಓವರ್ ಸಂಚಾರ ನಿರ್ಬಂಧ - ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಸಂಚಾರವಿಲ್ಲ
ಬೆಂಗಳೂರಲ್ಲಿ ಪಂಚ ಹೋಳಾದ ಪೊಲೀಸ್ ಕಮೀಷನರೇಟ್‌