ಗಣರಾಜ್ಯೋತ್ಸವ ಅಂಗವಾಗಿ ಮಹರ್ಷಿ ವಾಲ್ಮೀಕಿ ಮಾದರಿಯಲ್ಲಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

Published : Jan 16, 2025, 09:39 AM IST
Lalbagh Flower Show

ಸಾರಾಂಶ

ಗಣರಾಜ್ಯೋತ್ಸವ ಅಂಗವಾಗಿ ಮಹರ್ಷಿ ವಾಲ್ಮಿಕಿ ಅವರ ವಿಷಯಾಧಾರಿತ 217ನೇ ಫಲಪುಷ್ಪ ಪ್ರದರ್ಶನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇಂದಿನಿಂದ (ಜ.16) ಆರಂಭವಾಗಲಿದ್ದು, ಹನ್ನೆರಡು ದಿನಗಳವರೆ ಅಂದರೆ 27ರವರೆಗೆ ನಡೆಯಲಿದೆ.

ಬೆಂಗಳೂರು : ಗಣರಾಜ್ಯೋತ್ಸವ ಅಂಗವಾಗಿ ಮಹರ್ಷಿ ವಾಲ್ಮಿಕಿ ಅವರ ವಿಷಯಾಧಾರಿತ 217ನೇ ಫಲಪುಷ್ಪ ಪ್ರದರ್ಶನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇಂದಿನಿಂದ (ಜ.16) ಆರಂಭವಾಗಲಿದ್ದು, ಹನ್ನೆರಡು ದಿನಗಳವರೆ ಅಂದರೆ 27ರವರೆಗೆ ನಡೆಯಲಿದೆ. ಗುರುವಾರ ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಅತಿಥಿಗಳಾಗಿ ಭಾಗವಹಿಸುವರು ಎಂದು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ವಿಷಯಾಧಾರಿತ ಪ್ರದರ್ಶನ ಆಯೋಜಿಸಲಾಗಿದ್ದು, ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಬಗ್ಗೆ ಹೂವಿನ ಕಲಾಕೃತಿಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಪ್ರದರ್ಶನಕ್ಕೆ ಸುಮಾರು 2.75 ಕೋಟಿ ರು. ಹಣ ಖರ್ಚು ಮಾಡಲಾಗುತ್ತಿದೆ ಎಂದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಉದ್ಯಾನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಡಾ. ಎಂ.ಜಗದೀಶ್ ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಬರೆಯಲು ಕುಳಿತಿರುವ ದೃಶ್ಯ, ಆಶ್ರಮ, ಹುತ್ತ, ಜಟಾಯು ಪಕ್ಷಿ, ರಾಮಾಯಣ ಮಹಾಕಾವ್ಯ ಕೃತಿಯ ಪ್ರತಿಕೃತಿ, ತಪಸ್ಸಿಗಾಗಿ ಕೂತು ಅವರ ಸುತ್ತಲೂ ಹುತ್ತ ಬೆಳೆದಿರುವುದು ಹೀಗೆ ನಾನಾ ಪ್ರತಿಕೃತಿಗಳನ್ನು ಪ್ರದರ್ಶನದಲ್ಲಿ ನಿರ್ಮಿಸಲಾಗಿದೆ. ರಾಮಾಯಣದ ಓಲೆಗರಿ ಹಸ್ತ ಪ್ರತಿಗಳ ಪ್ರದರ್ಶನ, ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡಲಿರುವ ಫಾಗರ್ಸ್ ಹೀಗೆ ಹಲವು ಆಕರ್ಷಣೆಗಳಿರುತ್ತವೆ ಎಂದು ತಿಳಿಸಿದರು.

1.50 ಲಕ್ಷ ಡಚ್ ಗುಲಾಬಿ ಹೂವು:

ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ (ವಾಲ್ಮೀಕ) ಕಲಾಕೃತಿಯ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಈ ಕಲಾಕೃತಿಯ ಪೀಠಭಾಗವು 10 ಅಡಿ ಎತ್ತರ ಮತ್ತು 38 ಅಡಿ ಸುತ್ತಳತೆಯನ್ನು ಹೊಂದಿದ್ದು, 1.50 ಲಕ್ಷ ಡಚ್ ಗುಲಾಬಿ ಹೂವುಗಳನ್ನು ಹಾಗೂ 4 ಕ್ವಿಂಟಲ್ ಪಿಂಚ್ಡ್ ಗುಲಾಬಿ ಹೂವುಗಳನ್ನು ಬಳಲಾಗುವುದು. 3 ಕ್ವಿಂಟಲ್ ಹೈದರಾಬಾದ್ ಸೇವಂತಿಗೆ ಹೂವುಗಳನ್ನು ಬಳಸಲಾಗುವುದು. ಹೂವುಗಳನ್ನು ಎರಡು ಬಾರಿ ಬದಲಿಸಲಾಗುವುದು. (ಹೀಗಾಗಿ ಈ ಹೂವುಗಳು ದ್ವಿಗುಣ ಪ್ರಮಾಣದಲ್ಲಿರುತ್ತವೆ) ರಾಮಾಯಣದ ಸಂಪೂರ್ಣ ಚಿತ್ರಣವನ್ನು ಹೂವುಗಳು, ಪ್ರತಿಕೃತಿಗಳು, ರಾಮ-ಸೀತೆ, ಲಕ್ಷ್ಮಣರ ಕುರಿತು ತಿಳಿಸಲಾಗುವುದು ಎಂದು ಹೇಳಿದರು.

ಉಳಿದಂತೆ ಎಂದಿನಂತೆ ಗಾಜಿನ ಮನೆ ಸುತ್ತ ನವಿಲು, ಹೂವಿನ ಜಲಪಾತಗಳು, ಹ್ಯಾಂಗಿಂಗ್ ಪಾಟ್‌ಗಳು, ವರ್ಟಿಕಲ್ ಗಾರ್ಡನ್, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಹೂ ಗಿಡಗಳು, ತರಕಾರಿ ಮತ್ತು ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿರುತ್ತದೆ.

ಭದ್ರತೆ, ಮೂಲ ಸೌಲಭ್ಯ:

ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ರಕ್ಷಣೆಗೆ ಅಗತ್ಯ ಭದ್ರತಾ ಸಿಬ್ಬಂದಿ ಜತೆಗೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ತಾತ್ಕಾಲಿಕ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆ, ಎಲ್ಲಾ ಪ್ರವೇಶ ದ್ವಾರಗಳು ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಮಕ್ಕಳಿಗೆ ರಜಾ ಮತ್ತು ವಾರದ ದಿನಗಳಲ್ಲಿ ತಲಾ 30 ರು. ಇದ್ದರೆ ವಯಸ್ಕರಿಗೆ ವಾರದ ದಿನಗಳಂದು 80 ರು. ಶನಿವಾರ, ಭಾನುವಾರ 100 ರು. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಜ.16 ರಿಂದ 27 ರವರೆಗೆ ನಿತ್ಯ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ನಡೆಯುತ್ತದೆ. (ವಾಯುವಿಹಾರಿಗಳು ಬೆಳಗ್ಗೆ ಟಿಕೆಟ್ ಪಡೆದು ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.)

ಆನ್‌ಲೈನ್‌ ಟಿಕೆಟ್‌ ಪಡೆಯಿರಿ

ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯ ಲಭ್ಯವಿದೆ. ಆಸಕ್ತರು ವೆಬ್‌ಸೈಟ್‌:  https:hasiru.karnataka.gov.in/floweshow/login.aspx ಗೆ ಭೇಟಿ ನೀಡಿ ಅಥವಾ ಮೊಬೈಲ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಆನ್‌ಲೈನ್‌ ಟಿಕೆಟ್‌ ಬುಕ್‌ ಮಾಡಬಹುದು.

ಲಾಲ್‌ಬಾಗ್ ಡಬಲ್ ರೋಡ್ ದ್ವಾರದಿಂದ ಆಗಮಿಸುವ ಶಾಲಾ ಕಾಲೇಜು ವಾಹನಗಳು, ವಿಶೇಷಚೇತನರ ವಾಹನಗಳು, ಆಂಬ್ಯುಲೆನ್ಸ್‌ ಮತ್ತಿತರ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ವಾಹನಗಳಿಗೆ ಪ್ರವೇಶವಿಲ್ಲ. ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಹಾಪ್‌ಕಾಮ್ಸ್ ಆವರಣ ಹಾಗೂ ಜೆ.ಸಿ. ರಸ್ತೆಯ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಬಹುದು. ದ್ವಿಚಕ್ರ ವಾಹನಗಳನ್ನು ಲಾಲ್‌ಬಾಗ್ ಮುಖ್ಯದಾರದ ಬಳಿಯಿರುವ ಆಲ್ ಅಮೀನ್ ಕಾಲೇಜು ಆವರಣದ ನಿಲ್ದಾಣ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದು. ಸಾಧ್ಯವಾದಷ್ಟು ಮೆಟ್ರೋ ರೈಲ್‌ ಬಳಸಿಕೊಂಡು ಬನ್ನಿ ಎಂದು ಜಗದೀಶ್ ಮನವಿ ಮಾಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ