ಕಿಕ್‌ಬ್ಯಾಕ್‌ಗೆ ಸಿದ್ದು ಉತ್ತರಿಸಲಿ - ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಎದುರಿಸ್ತಿದ್ದಾರೆ : ಎಚ್‌ಡಿಕೆ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಣಿ ಗುತ್ತಿಗೆ ನವೀಕರಣಕ್ಕೆ ಕಿಕ್‌ಬ್ಯಾಕ್‌ ಆರೋಪ ಬಂದಿದ್ದು, ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮಕ್ಕೆ ಉತ್ತರ ನೀಡಬೇಕು ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

  ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಣಿ ಗುತ್ತಿಗೆ ನವೀಕರಣಕ್ಕೆ ಕಿಕ್‌ಬ್ಯಾಕ್‌ ಆರೋಪ ಬಂದಿದ್ದು, ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮಕ್ಕೆ ಉತ್ತರ ನೀಡಬೇಕು ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಶನಿವಾರ ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜೆಡಿಎಸ್‌ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಮಮೂರ್ತಿಗೌಡ ಎಂಬುವವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಗಣಿಗಾರಿಕೆ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದ್ದು, ಗಣಿ ಗುತ್ತಿಗೆ ನವೀಕರಣದಿಂದ ಸರ್ಕಾರದ ಬೊಕ್ಕಸಕ್ಕೆ 5 ಸಾವಿರ ಕೋಟಿ ರು. ನಷ್ಟ ಉಂಟು ಮಾಡಿರುವ ಗಂಭೀರ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದಾಗ ಜನರ ಮೇಲೆ ತೆರಿಗೆ ಹಾಕಲಿಲ್ಲ. ಆದರೆ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಾಗಿ ಬೆಲೆ ಏರಿಕೆ ಮಾಡಿದೆ. ಕಾಂಗ್ರೆಸ್‌ ಸರ್ಕಾರ ಎರಡು ಲಕ್ಷ ಕೋಟಿ ರು. ಸಾಲ ಮಾಡಿದ್ದು, ಇದೇ ಸರ್ಕಾರ ಮುಂದುವರೆದರೆ 10 ಲಕ್ಷ ಕೋಟಿ ರು. ಸಾಲ ಮಾಡಲಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರದ ಮುಂದೆ ಹೋಗಿ ಭಿಕ್ಷೆ ಬೇಡಲಿಲ್ಲ. ಜನತೆ ಕೊಟ್ಟ ತೆರಿಗೆ ಹಣವನ್ನೇ ಬಳಸಲಾಯಿತು. ಕಾಂಗ್ರೆಸ್‌ ಸರ್ಕಾರ ಪ್ರತಿ ನಿತ್ಯ ಬೆಲೆ ಏರಿಕೆ ಮಾಡುತ್ತಿದೆ. ಜನರು ಸಂಕಷ್ಟಕ್ಕೊಳಗಾಗಿದ್ದು, ಕಾಂಗ್ರೆಸ್‌ಗೆ ಶಾಪ ಹಾಕುವ ಮಟ್ಟಕ್ಕೆ ಹೋಗಿದ್ದಾರೆ ಎಂದರು.

ಕಾಂಗ್ರೆಸ್‌ ಪುಡಾರಿಗಳಿಂದ ಬೆದರಿಕೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಟನ್‌ ಗಟ್ಟಲೆ ದಾಖಲೆಗಳಿವೆ ಎಂಬ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್‌ನ ಪುಡಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ನನ್ನ ದನಿಯನ್ನು ಅಡಗಿಸುವ ಕೆಲಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೆದರುವ ವ್ಯಕ್ತಿಯೂ ನಾನಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡಿ ಲಾರಿಯಲ್ಲಿ ದಾಖಲೆಗಳನ್ನು ತಂದು ಕೊಡುತ್ತಾರಂತೆ. ತಂದು ಕೊಡಲಿ, ನಾನೂ ನೋಡುತ್ತೇನೆ. ಯಾವ ಮಟ್ಟದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಕಾಂಗ್ರೆಸ್ ಪುಡಾರಿಗಳು ಎನ್ನುವುದು ನನಗೆ ಗೊತ್ತಿದೆ ಎಂದು ಕಿಡಿಕಾರಿದರು.

Share this article