ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಶುರು: ಮಧು - 5000 ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಪ್ರಕ್ರಿಯೆ

Published : Aug 20, 2024, 10:32 AM IST
Madhu Bangarappa

ಸಾರಾಂಶ

ಕಲ್ಯಾಣ ಕರ್ನಾಟಕದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರು :  ಕಲ್ಯಾಣ ಕರ್ನಾಟಕದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಮತ್ವ ಸಿಎಸ್‌ಆರ್‌ ಶಿಕ್ಷಣ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್​ಕೆಜಿಯಿಂದ 12ನೇ ತರಗತಿವರೆಗೂ ಒಂದೇ ಆವರಣದಲ್ಲಿ ಶಿಕ್ಷಣ ಸಿಗುವಂತೆ ಮಾಡುವ ಗುರಿಯೊಂದಿಗೆ ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಸಿಎಸ್ಆರ್​​ ನಿಧಿ ಬಳಸಿಕೊಂಡು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲೂ ಆರಂಭಿಸಲಾಗುವುದು ಎಂದರು.

ಶೀಘ್ರ ಶಿಕ್ಷಕರ ನೇಮಕ:

ಸರ್ಕಾರಿ ಶಾಲೆಗಳಲ್ಲಿ 56 ಸಾವಿರ ಶಿಕ್ಷಕರ‌ ಕೊರತೆ ಇದೆ. ಇದಕ್ಕೆ ಪ್ರತಿಯಾಗಿ 45 ಸಾವಿರ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ಈಗ 12500 ಶಿಕ್ಷಕರ ನೇಮಕಾತಿಯಾಗುತ್ತಿದೆ. 5000 ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಸದ್ಯದಲ್ಲೇ ಆಗಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಸರ್ಕಾರ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರವನ್ನು ಉಚಿತವಾಗಿ ನೀಡುತ್ತಿದೆ. ಈಗ ಖಾಸಗಿ ಸಹಭಾಗಿತ್ವದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಜೀಂ ಪ್ರೇಮ್‌ ಜಿ ಫೌಂಡೇಶನ್ 1,500 ಕೋಟಿ ಮೊತ್ತದಲ್ಲಿ ಮುಂದಿನ ಮೂರು ವರ್ಷ ಮೊಟ್ಟೆ ಕೊಡಲು ಒಡಂಬಡಿಕೆ ಮಾಡಲಾಗಿದೆ. ಈಗ ಇನ್ನೂ ಕೆಲ ಶಾಲೆಗಳ ಅಭಿವೃದ್ಧಿಗೆ ಸಂಸ್ಥೆ ಮುಂದೆ ಬಂದಿದೆ. ಇದರ ಜೊತೆಗೆ ಅನೇಕ ಕಂಪನಿಗಳು ರಾಜ್ಯದ ಅನೇಕ ಶಾಲೆಗಳ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸುತ್ತಿವೆ ಎಂದರು.

PREV

Recommended Stories

ಸಂಘಟಿತರಾಗಿ ಪಕ್ಷ ಕಟ್ಟಲು ಮುಂದಾಗಿ
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಅಸಮತೋಲನ