1971ರಿಂದ ನಿತ್ಯ ಕನ್ನಡಪ್ರಭ ಓದುತ್ತಿರುವ ‘ಮಹಾ ಓದುಗ’

Published : Jul 11, 2025, 11:00 AM IST
Kannada

ಸಾರಾಂಶ

‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎನ್ನುವವರ ನಡುವೆ ‘ಓಲ್ಡ್ ಈಸ್ ಗೋಲ್ಡ್’ ಎನ್ನುವ ನಿಷ್ಠಾವಂತ ಓದುಗರೊಬ್ಬರ ಪತ್ರಿಕೆ ಸಂಗ್ರಹದ ಅಪಾರ ಪ್ರೀತಿಯ ಕಥನವಿದು. ಬಂಟ್ವಾಳ ತಾಲೂಕಿನ 88ರ ಹರೆಯದ ಈ ಕೃಷಿಕರು ಕಳೆದ 55 ವರ್ಷಗಳಿಂದ ‘ಕನ್ನಡಪ್ರಭ’ದ ನಿರಂತರ ಓದುಗ ಹಾಗೂ ಸಂಗ್ರಹಕಾರ ಎಂಬುದು ವಿಶೇಷ.

ಮೌನೇಶ ವಿಶ್ವಕರ್ಮ

 ಬಂಟ್ವಾಳ :  ‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎನ್ನುವವರ ನಡುವೆ ‘ಓಲ್ಡ್ ಈಸ್ ಗೋಲ್ಡ್’ ಎನ್ನುವ ನಿಷ್ಠಾವಂತ ಓದುಗರೊಬ್ಬರ ಪತ್ರಿಕೆ ಸಂಗ್ರಹದ ಅಪಾರ ಪ್ರೀತಿಯ ಕಥನವಿದು. ಬಂಟ್ವಾಳ ತಾಲೂಕಿನ 88ರ ಹರೆಯದ ಈ ಕೃಷಿಕರು ಕಳೆದ 55 ವರ್ಷಗಳಿಂದ ‘ಕನ್ನಡಪ್ರಭ’ದ ನಿರಂತರ ಓದುಗ ಹಾಗೂ ಸಂಗ್ರಹಕಾರ ಎಂಬುದು ವಿಶೇಷ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಸ್ಬ ಗ್ರಾಮ ಚೆಂಡ್ತಿಮಾರ್‌ ನಿವಾಸಿ ಸಿ.ಮುತ್ತಪ್ಪ ಪೂಜಾರಿ (88) ಪತ್ರಿಕೆ ಓದುವುದು ಮಾತ್ರವಲ್ಲ, ಜಾಗ್ರತೆಯಿಂದ ಸಂಗ್ರಹಿಸಿಟ್ಟಿರುವುದು ಅಚ್ಚರಿ.

ಮುತ್ತಪ್ಪ ವೃತ್ತಿಯಲ್ಲಿ ಕೃಷಿಕರು. ಕೆಲ ವರ್ಷ ಬೀಡಿ ಗುತ್ತಿಗೆ ವಹಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಒಡನಾಡಿ. ದಿನಪತ್ರಿಕೆಯನ್ನು ಓದುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ.

ಓದು ಶುರುವಾದದ್ದು ಹೀಗೆ...:

ತಾವು ಯುವಕರಾಗಿದ್ದಾಗ ತಮ್ಮ ಹತ್ತಿರದ ಮನೆಗೆ ಮಾತ್ರ ಪತ್ರಿಕೆ ಬರುತ್ತಿತ್ತು. ಆಗ ಸ್ಥಳೀಯರೆಲ್ಲರೂ ಸಹ ಅದನ್ನೇ ಅವಲಂಬಿಸಿದ್ದರು. ಹೀಗಾಗಿ ಮುತ್ತಪ್ಪ ಅವರು ತಮ್ಮ ಮನೆಗೇ ಪುತ್ರಿಕೆ ಹಾಕಿಸಲು ಆರಂಭಿಸಿದ್ದರು.

ಪತ್ರಿಕೆ ಮೇಲಿನ ಅಪಾರ ಪ್ರೀತಿಯಿಂದಾಗಿ ಓದಿದ ಬಳಿಕ ಎಲ್ಲೆಂದರಲ್ಲಿ ಬಿಸಾಡದೆ ಹಾಗೇ ಕಪಾಡಿಕೊಂಡು ಬಂದಿದ್ದಾರೆ. ತಮ್ಮ ಕೋಣೆ ತುಂಬೆಲ್ಲಾ ಪತ್ರಿಕೆಗಳೇ ತುಂಬಿಹೋಗಿದ್ದು, ಮಲಗುವ ಮಂಚ ಹೊರತಾಗಿ ಎಲ್ಲಾ ಕಡೆ ಪತ್ರಿಕೆಯ ರಾಶಿಯೇ ತುಂಬಿವೆ.

1971ರಿಂದ ಪತ್ರಿಕೆಯನ್ನು ಗೆದ್ದಲು ಹಿಡಿಯದಂತೆ, ನೀರು ಬಿದ್ದು ಹಾಳಾಗದಂತೆ, ಹರಿದುಹೋಗದಂತೆ ಜೋಪಾನವಾಗಿ ನೋಡಿಕೊಂಡು ಬಂದಿದ್ದಾರೆ. ಹೀಗಾಗಿ ಕಳೆದ 55 ವರ್ಷಗಳಿಗಿಂತಲೂ ಹಳೆಯ ಪ್ರತಿಗಳು ಇವರಲ್ಲಿವೆ. ಕನ್ನಡಪ್ರಭ ಸಹಿತ 2 ಪತ್ರಿಕೆಗಳ ಓದು ಮತ್ತು ಸಂಗ್ರಹ ಪೂಜಾರಿ ಅವರ ಹವ್ಯಾಸ.

ಪತ್ರಿಕೆಯಿಂದ ಜ್ಞಾನ ವೃದ್ಧಿ:

ಪತ್ರಿಕೆಗಳನ್ನು ಓದಿದ ಬಳಿಕ ಮೂಲೆಗುಂಪು ಮಾಡುತ್ತಾರೆ, ಆದರೆ ಪ್ರತಿಯೊಂದು ಪತ್ರಿಕೆ ಕೂಡ ವರ್ತಮಾನದ ದಾಖಲೆ. ಅದನ್ನು ಮುಂದಿನವರೂ ಓದಬಹುದು ಮತ್ತು ಓದಬೇಕು ಎನ್ನುವ ಬಲವಾದ ಆಶಯ ವ್ಯಕ್ತಪಡಿಸುವ ಇವರು, ಯುವ ಸಮೂಹ ಸಾಮಾಜಿಕ ಜಾಲತಾಣದ ವೇಗಕ್ಕೆ ಬಲಿಯಾಗದೆ ಅಗತ್ಯಕ್ಕೆ ಮಾತ್ರ ಮೊಬೈಲ್‌ ಬಳಸಿ, ವಾಸ್ತವಕ್ಕೆ ಹತ್ತಿರವಿದ್ದು ಜೀವನ ನಡೆಸಬೇಕು, ಪತ್ರಿಕೆ, ಪುಸ್ತಕಗಳ ಓದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಹೇಳುತ್ತಾರೆ.

ಬಾಂಗ್ಲಾ ವಿಮೋಚನೆಯ ವರದಿಗಳು:

1971ರಲ್ಲಿ ಬಾಂಗ್ಲಾ ವಿಮೋಚನೆಗೆ ಸಂಬಂಧಪಟ್ಟ ವರದಿಗಳು ಪ್ರಕಟವಾದ ಪತ್ರಿಕೆಗಳ ಸಂಗ್ರಹ ಮುತ್ತಪ್ಪ ಪೂಜಾರಿಯವರಲ್ಲಿವೆ. ಅಂದಿನ ಪ್ರತಿದಿನದ ವರದಿಗಳನ್ನು ಪ್ರತ್ಯೇಕವಾಗಿ ಜೋಡಿಸಿಟ್ಟಿದ್ದಾರೆ. ಆಗಿನ ಬೆಳವಣಿಗೆಗಳಿಗೆ ಸಂಬಂಧಿಸಿದ ಅಪಾರವಾದ ಜ್ಞಾನವೂ ಅವರಲ್ಲಿದೆ.

25ನೇ ವಯಸ್ಸಿನಿಂದಲೂ ಪತ್ರಿಕೆ ಓದುತ್ತಿರುವ ಅವರಿಗೆ ಖಚಿತವಾಗಿ ಯಾವಾಗಿನಿಂದ ಪತ್ರಿಕೆ ಸಂಗ್ರಹ ಆರಂಭಿಸಿದೆ ಎಂಬ ಕುರಿತು ನೆನಪಿಲ್ಲ.

ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ ಸಂದರ್ಭ, ಪ್ರಚಾರದಲ್ಲಿ ತೊಡಗಿಸಿಕೊಂಡವರು. ಬಂಟ್ವಾಳ ಮಾರ್ಗವಾಗಿ ಇಂದಿರಾ ಗಾಂಧಿ ಹಾದು ಹೋದ ಸಂದರ್ಭ ತನ್ನ ಹಿರಿ ಮಗಳಿಂದ ಹೂವಿನ ಹಾರ ಹಾಕಿಸಿದ್ದೆ ಎನ್ನುವುದನ್ನೂ ಅವರು ಸ್ಮರಿಸಿಕೊಂಡರು.

ಕನ್ನಡಪ್ರಭ ಅಚ್ಚುಮೆಚ್ಚು:

‘ಕನ್ನಡಪ್ರಭ’ ನನ್ನ ಅತ್ಯಂತ ಪ್ರೀತಿಯ ಪತ್ರಿಕೆ ಎನ್ನುವ ಇವರು, ರಾಜ್ಯಮಟ್ಟದ ಸುದ್ದಿಗಳಿಗಾಗಿ ಕನ್ನಡಪ್ರಭವನ್ನೇ ಆಯ್ದುಕೊಂಡೆ. ಬಳಿಕ ಸ್ಥಳೀಯ ಪತ್ರಿಕೆಯನ್ನೂ ಖರೀದಿಸಿ ಓದಲು ಶುರುಮಾಡಿದೆ ಎನ್ನುತ್ತಾರೆ. 1971ರಲ್ಲಿ ಕನ್ನಡಪ್ರಭಕ್ಕೆ 20 ಪೈಸೆ ದರ ಇತ್ತು, ಈಗ 7 ರು. ಆಗಿದೆ. ಆದರೆ ಅಂದಿನಿಂದ ಈವರೆಗೂ ‘ಕನ್ನಡಪ್ರಭ’ ಓದುತ್ತಲೇ ಇದ್ದೇನೆ ಎನ್ನುವ ಮುತ್ತಪ್ಪ ಪೂಜಾರಿ ಈ ದಿನದ ‘ಕನ್ನಡಪ್ರಭ’ ಪತ್ರಿಕೆಯನ್ನು ಎತ್ತಿ ತೋರಿಸಿ ಖುಷಿಪಟ್ಟರು.

ಜೋಪಾನವಾಗಿ ಇರಿಸಿಕೊಂಡಿದ್ದೇನೆ

ನನ್ನ 25ನೇ ವರ್ಷದಿಂದ ನಾನು ಓದಿದ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಪತ್ರಿಕೆಗಳನ್ನು ಓದಿದ ಬಳಿಕ ಅವುಗಳನ್ನು ಜೋಪಾನವಾಗಿಟ್ಟುಕೊಂಡು ಬಂದಿದ್ದೇನೆ. ಮನೆಯವರು ಏನಾದರೂ ಅವಶ್ಯಕತೆಗೆ ಪೇಪರ್ ಕೇಳಿದರೂ ನಾನು ಸಂಗ್ರಹಿಸಿಟ್ಟ ಪತ್ರಿಕೆಗಳನ್ನು ಕೊಟ್ಟಿಲ್ಲ.

-ಸಿ. ಮುತ್ತಪ್ಪ ಪೂಜಾರಿ, ಪತ್ರಿಕೆ ಸಂಗ್ರಹಕಾರ.

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿರುವ ಮುತ್ತಪ್ಪ ಪೂಜಾರಿ ಬಳಿ ಗುರುಗಳಿಗೆ ಸಂಬಂಧಪಟ್ಟ ಪುಸ್ತಕಗಳಿವೆ. ಅವರು ಮಲಗುವ ಮಂಚದ ಮೇಲೆ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ದೇಶದ ಸಂವಿಧಾನದ ಪುಸ್ತಕಗಳು ಸದಾ ಇರುತ್ತದೆ. ಸದಾ ಶ್ವೇತ ವಸ್ತ್ರಧಾರಿಯಾಗಿ ಬದುಕಿನಲ್ಲಿಯೂ ಉತ್ತಮ ಸಂಸ್ಕಾರ ಅಳವಡಿಸಿಕೊಂಡಿರುವ ಇವರು ಈಗಲೂ ಪ್ರತಿದಿನ ಬೆಳಗ್ಗೆ ರೇಡಿಯೋ ಕೇಳುವುದು, ಪತ್ರಿಕೆ ಓದುವುದನ್ನು ಯೋಗಭ್ಯಾಸದಂತೆಯೇ ಅಳವಡಿಸಿಕೊಂಡಿದ್ದಾರೆ.

PREV
Read more Articles on