ಬಿಬಿಎಂಪಿಗೆ ಮಹೇಶ್ವರ್‌ ರಾವ್‌ ಪೂರ್ಣಾವಧಿ ಮುಖ್ಯ ಆಯುಕ್ತ

ಸಾರಾಂಶ

ಹೆಚ್ಚುವರಿ ಹೊಣೆಗಾರಿಕೆಯಡಿ ನಿಯೋಜನೆಗೊಂಡಿದ್ದ ಬಿಬಿಎಂಪಿಯ ಮುಖ್ಯ ಆಯುಕ್ತ ಎಂ.ಮಹೇಶ್ವರ್‌ ರಾವ್‌ ಅವರಿಗೆ ಶುಕ್ರವಾರ ರಾಜ್ಯ ಸರ್ಕಾರ ಪೂರ್ಣಾವಧಿ ಜವಾಬ್ದಾರಿ ವಹಿಸಿ ಆದೇಶಿಸಿದೆ.

ಬೆಂಗಳೂರು : ಹೆಚ್ಚುವರಿ ಹೊಣೆಗಾರಿಕೆಯಡಿ ನಿಯೋಜನೆಗೊಂಡಿದ್ದ ಬಿಬಿಎಂಪಿಯ ಮುಖ್ಯ ಆಯುಕ್ತ ಎಂ.ಮಹೇಶ್ವರ್‌ ರಾವ್‌ ಅವರಿಗೆ ಶುಕ್ರವಾರ ರಾಜ್ಯ ಸರ್ಕಾರ ಪೂರ್ಣಾವಧಿ ಜವಾಬ್ದಾರಿ ವಹಿಸಿ ಆದೇಶಿಸಿದೆ.

ಕಳೆದ ಬುಧವಾರವಷ್ಟೇ ಬಿಬಿಎಂಪಿಯ ಮುಖ್ಯ ಆಯುಕ್ತ ಹುದ್ದೆಯ ಹೆಚ್ಚುವರಿ ಹೊಣೆಗಾರಿ ವಹಿಸಿಕೊಂಡಿದ್ದ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ್‌ ರಾವ್‌ ಅವರಿಗೆ ಶುಕ್ರವಾರ ಪೂರ್ಣಾವಧಿ ಜವಾಬ್ದಾರಿ ನೀಡಲಾಗಿದೆ. ಜತೆಗೆ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಸಾರ್ವಜನಿಕ ಟೀಕೆ ಬೆನ್ನಲ್ಲೇ ಆದೇಶ:

ಬೆಂಗಳೂರಿನ ಮೂಲಸೌಕರ್ಯ ನಿರ್ವಹಿಸುವ ಹೊಣೆಗಾರಿಕೆ ಬಿಬಿಎಂಪಿಯ ಜವಾಬ್ದಾರಿಯಾಗಿದೆ. ಅಷ್ಟೊಂದು ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಾದ ಹುದ್ದೆಗೆ ಬೇರೆ ಇಲಾಖೆಯ ಅಧಿಕಾರಿಗೆ ಹೆಚ್ಚುವರಿಯಾಗಿ ನಿಯೋಜಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶುಕ್ರವಾರ ಮಹೇಶ್ವರ್‌ ರಾವ್‌ ಅವರಿಗೆ ಪೂರ್ಣಾವಧಿ ಜವಾಬ್ದಾರಿ ನೀಡಿ ಆದೇಶಿಸಿದೆ.

ವಿವಿಧ ಆಯುಕ್ತರ ಜವಾಬ್ದಾರಿ ಬದಲಾವಣೆ

ಇದರೊಂದಿಗೆ ಪಾಲಿಕೆಯ ವಿವಿಧ ವಿಶೇಷ ಆಯುಕ್ತರ ಜವಾಬ್ದಾರಿಯನ್ನು ಬದಲಾವಣೆ ಮಾಡಲಾಗಿದೆ. ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ಅವರು ನಿರ್ವಹಿಸುತ್ತಿದ್ದ ಶಿಕ್ಷಣ ವಿಭಾಗವನ್ನು ಕಲ್ಯಾಣ ಮತ್ತು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಲ್ಕರ್‌ ವಿಕಾಸ್‌ ಕಿಶೋರ್‌ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಪ್ರೀತಿ ಗೆಹ್ಲೋಟ್‌ ಅವರಿಗೆ ಪರಿಸರ, ಹವಾಮಾನ ಅರಣ್ಯ ವಿಭಾಗ ಮುಂದುವರೆಸಲಾಗಿದೆ. 

ವಿಶೇಷ ಆಯುಕ್ತ ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌ ನಿರ್ವಹಿಸುತ್ತಿದ್ದ ಆಡಳಿತ ವಿಭಾಗವನ್ನು ದಾಸರಹಳ್ಳಿಯ ವಲಯ ಆಯುಕ್ತ ನವೀನ್‌ ಕುಮಾರ್‌ ರಾಜು ಅವರಿಗೆ ನೀಡಲಾಗಿದೆ. ಅವಿನಾಶ್‌ ಮೆನನ್‌ ರಾಜೇಂದ್ರನ್‌ ಅವರಿಗೆ ಯೋಜನಾ ವಿಭಾಗದ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

Share this article