ಮೆಟ್ರೋ ಟಿಕೆಟ್‌ ದರ ಶೇ.50 ರಿಂದ ಶೇ.80ರವರೆಗೆ ಏರಿಕೆ : ತಕ್ಷಣ ವಾಪಸ್‌ ಪಡೆಯುವಂತೆ ಜನರ ಆಗ್ರಹ

ಸಾರಾಂಶ

ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ವಿರುದ್ಧದ ಪ್ರಯಾಣಿಕರ ಅಸಮಾಧಾನ ಹೆಚ್ಚಿದ್ದು, ಮೆಟ್ರೋದಲ್ಲಿ ಸುರಕ್ಷತೆ, ಕೊನೆಯ ಮೈಲಿ ಸಂಪರ್ಕ ಅವ್ಯವಸ್ಥೆ ಸೇರಿ ಇನ್ನಿತರ ಸಮಸ್ಯೆಗಳನ್ನು ಮೊದಲು ಪರಿಹರಿಸಿ ಎಂದು ಒತ್ತಾಯಿಸುತ್ತಿದ್ದಾರೆ.

 ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ವಿರುದ್ಧದ ಪ್ರಯಾಣಿಕರ ಅಸಮಾಧಾನ ಹೆಚ್ಚಿದ್ದು, ಮೆಟ್ರೋದಲ್ಲಿ ಸುರಕ್ಷತೆ, ಕೊನೆಯ ಮೈಲಿ ಸಂಪರ್ಕ ಅವ್ಯವಸ್ಥೆ ಸೇರಿ ಇನ್ನಿತರ ಸಮಸ್ಯೆಗಳನ್ನು ಮೊದಲು ಪರಿಹರಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಮೆಟ್ರೋ ಟಿಕೆಟ್‌ ದರ ಶೇ.50 ರಿಂದ ಶೇ.80ರವರೆಗೆ ಏರಿಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದು, ತಕ್ಷಣ ದರ ಏರಿಕೆ ವಾಪಸ್‌ ಪಡೆಯುವಂತೆ ಆಗ್ರಹಿಸಿದ್ದಾರೆ.

‘ಕೇಂದ್ರ, ರಾಜ್ಯ ಸರ್ಕಾರಗಳು ಸೇರಿ ಲೂಟಿ ಮಾಡುತ್ತಿವೆ’, ‘ಬೈಕಾಟ್‌ ನಮ್ಮ ಮೆಟ್ರೋ’, ‘ನಮ್ಮ ಮೆಟ್ರೋ ಏರಿ ಕೆಟ್ರೋ, ನಮ್ಮ ಮೆಟ್ರೋ ನಮಗೆ ಇಟ್ರೋ’, ಇಂತಹ ಸಾಕಷ್ಟು ಆಕ್ರೋಶಭರಿತ, ವ್ಯಂಗ್ಯದ ಮಾತುಗಳು ಸೋಮವಾರವೂ ಸಾಮಾಜಿಕ ಜಾಲತಾಣ ‘ಎಕ್ಸ್‌’ ಸೇರಿ ಪ್ರಯಾಣಿಕ ವಲಯದಲ್ಲಿ ಕೇಳಿ ಬಂದಿವೆ.

ವಿವಿಧ ಪ್ರಯಾಣಿಕರನ್ನು ‘ಕನ್ನಡಪ್ರಭ’ ಮಾತನಾಡಿಸಿದಾಗ, ಮೆಜಸ್ಟಿಕ್‌ನಿಂದ ಮಂಜುನಾಥನಗರದವರೆಗೆ ಈ ಹಿಂದೆ ಇದ್ದ ₹40 ಬದಲಾಗಿ ಈಗ ₹ 60 ಪಾವತಿಸಬೇಕಿದೆ. ಸಿಂಗಯ್ಯನ ಪಾಳ್ಯದಿಂದ ಮೈಸೂರು ರಸ್ತೆ ಮೆಟ್ರೋವರೆಗೆ ಇದ್ದ ಹಿಂದಿನ ದರ ₹ 50, ಈಗದು ₹ 80 ಆಗಿದೆ. ಯಶವಂತಪುರದಿಂದ ಎಂ.ಜಿ.ರಸ್ತೆಗೆ ಇದ್ದ ಹಿಂದಿನ ದರ ₹35, ಈಗ ₹60 ಆಗಿದೆ. ಇದಕ್ಕೆ ಹೋಲಿಸಿದರೆ ಕೆಲ ಮಾರ್ಗದಲ್ಲಿ ಕ್ಯಾಬ್‌, ಎಸಿ ಬಸ್‌ ಅಗ್ಗವಾಗುತ್ತದೆ. ಸಮಯ ಉಳಿತಾಯದ ಒಂದೇ ಕಾರಣಕ್ಕೆ ದುಬಾರಿ ದರ ತೆತ್ತು ಮೆಟ್ರೋವನ್ನು ನೆಚ್ಚಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.

ಇನ್ನು, ನಮ್ಮ ಮೆಟ್ರೋದಲ್ಲಿ ಕೊನೆ ಮೈಲಿ ಸಂಪರ್ಕ ವ್ಯವಸ್ಥೆ ಅಂದರೆ ಮೆಟ್ರೋ ನಿಲ್ದಾಣದಿಂದ ಕಚೇರಿವರೆಗೆ ಅಥವಾ ಮನೆಗೆ ತೆರಳಲು ಇನ್ನೂ ಸಮರ್ಪಕ ವ್ಯವಸ್ಥೆ ಇಲ್ಲ. ಬಿಎಂಟಿಸಿಯಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಎಲ್ಲೆಡೆ ಇಲ್ಲ. ಆಟೋ, ಕ್ಯಾಬ್‌ಗಳನ್ನು ಅವಲಂಬಿಸಬೇಕಾದ ಅಗತ್ಯವಿದ್ದು, ಅದಕ್ಕೂ ಹಣ ತೆತ್ತಬೇಕು. ಇದರಿಂದ ಪ್ರಯಾಣ ದರ ಹೆಚ್ಚಳವಾಗುತ್ತದೆ ಎಂದು ಪ್ರಯಾಣಿಕರು ಹೇಳುತ್ತಾರೆ.

ಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಇಲ್ಲ:

ಇಂಟರ್‌ಚೇಂಜ್‌ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಈಗ ಪೀಕ್‌ ಅವರ್‌ನಲ್ಲಿ ಕಿಕ್ಕಿರಿದು ಪ್ರಯಾಣಿಕರು ನಿಲ್ಲುವ ಸ್ಥಿತಿಯಿದ್ದು, ರೈಲುಗಳ ಕೊರತೆಯಿಂದಾಗಿ ಕಾಯಬೇಕಾಗುತ್ತಿದೆ ಎಂದು ಪ್ರಯಾಣಿಕ ರಘು ರಾಮಯ್ಯ ದೂರುತ್ತಾರೆ. ಸದ್ಯ ಇರುವ ನೇರಳೆ, ಹಸಿರು ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಮೆಜೆಸ್ಟಿಕ್‌ ಹೊರತುಪಡಿಸಿ ಎಲ್ಲಿಯೂ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್ ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಲೋಪವಿದೆ. ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ನಿಂತಿದ್ದರೂ ದಂಡ ವಿಧಿಸಲಾಗುತ್ತಿದೆ. ತಿನಿಸು ಸೇವಿಸುವಂತಿಲ್ಲ. ಹೀಗೆ ಸಾಕಷ್ಟು ಲೋಪಗಳ ನಡುವೆ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿರುವುದು ಸರಿಯೆ ಎಂದು ಪ್ರಶ್ನಿಸಿದರು.

ಮೆಟ್ರೋ ದರ ಏರಿಕೆ ವಾಪಸ್‌ ಪಡೆಯಲು ಬಿಜೆಪಿ ಮನವಿ

 ಬೆಂಗಳೂರು : ಹೆಚ್ಚಳ ಮೆಟ್ರೋ ರೈಲು ಸಂಚಾರ ದರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರ ನಿಯೋಗವು ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ವಾಹಕ ನಿರ್ದೇಶಕರಿಗೆ ಮನವಿ ಮಾಡಿದ್ದು, ನಾಗರಿಕರನ್ನು ಸುಲಿಗೆ ಮಾಡಲು ಅವಕಾಶ ಕೊಡುವುದಿಲ್ಲ. ದರ ಏರಿಕೆ ಹಿಂಪಡೆಯದಿದ್ದರೆ ಮುಂದಿನ ದಿನದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಪಕ್ಷದ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಮುಖಂಡರಾದ ಎಸ್‌.ಹರೀಶ್‌, ಎಸ್‌.ಪ್ರಕಾಶ್‌ ಮತ್ತಿತರರ ನಿಯೋಗವು ಸೋಮವಾರ ಮೆಟ್ರೋ ಸಂಸ್ಥೆಯ ನಿರ್ವಾಹಕ ನಿರ್ದೇಶಕರನ್ನು ಭೇಟಿ ಮಾಡಿ ಮೆಟ್ರೋ ಸೇವೆಯ ದರದಲ್ಲಿ ಪೂರ್ವಾಪರ ಆಲೋಚಿಸದೆ ನಗರದ ನಾಗರಿಕರನ್ನು ಸುಲಿಗೆ ಮಾಡಲು ಕೈಗೊಂಡಿರುವ ಭಾರಿ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ದೆಹಲಿ, ಮುಂಬೈ, ಹೈದರಾಬಾದ್, ಕೊಲ್ಕತ್ತಾ, ಚೆನ್ನೈ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ನಮ್ಮ ಮೆಟ್ರೋ ದುಬಾರಿ ದರವನ್ನು ಹೆಚ್ಚಿಸಿದೆ. ಮೆಟ್ರೋದಲ್ಲಿ ಹಲವು ವಿಭಾಗಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟುವ ಬದಲು ಪ್ರಯಾಣಿಕರಿಗೆ ಬರೆಯಾಗುವ ರೀತಿ ದರವನ್ನು ಹೆಚ್ಚಿಸುವುದು ಸೂಕ್ತವಲ್ಲ. ಕಿಲೋ ಮೀಟರ್‌ ಆಧಾರದಲ್ಲಿ ಪ್ರಯಾಣದರವನ್ನು ಹೆಚ್ಚಿಸಿ ಅದನ್ನು ಸ್ಟೇಷನ್‌ಗಳಿಗೆ ಅನ್ವಯ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ ಸರ್ಕಾರದಿಂದ ಆಘಾತ:

ಮೆಟ್ರೋ ರೈಲು ಸಂಚಾರ ದರವನ್ನು ತೀವ್ರ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ನಗರದ ಜನತೆಗೆ ಬಹು ದೊಡ್ಡ ಆಘಾತವನ್ನು ನೀಡಿದೆ. ನಾಗರಿಕರ ಮೇಲೆ ಒಂದಾದ ಮೇಲೆ ಒಂದು ದರ ಏರಿಕೆಯ ಗದಾ ಪ್ರಹಾರ ರಾಜ್ಯ ಸರ್ಕಾರ ಮಾಡುತ್ತಿರುವುದು ಜನ ವಿರೋಧಿ ನೀತಿಯನ್ನು ಬಯಲು ಮಾಡಿದೆ. ಒಂದೂವರೆ ವರ್ಷದ ಕಾಂಗ್ರೆಸ್‌ ಆಡಳಿತದಲ್ಲಿ ಜನತೆಯು ಕೇವಲ ವಿವಿಧ ಸೇವೆಗಳ ದರ ಏರಿಕೆಯನ್ನು ಕಾಣುತ್ತಿದ್ದಾರೆಯೇ ಹೊರತು ಸೇವೆಯ ಗುಣಮಟ್ಟದಲ್ಲಿ ಮಾತ್ರ ಏರಿಕೆ ಕಾಣಲು ಸಾಧ್ಯವೇ ಆಗಿಲ್ಲ ಎಂದು ಬಿಜೆಪಿ ಟೀಕಿಸಿದೆ.

ನಗರ ಸಂಚಾರ ದಟ್ಟಣೆಗೆ ಪರಿಹಾರ ನಿಡಲು ವಿಫಲವಾಗಿ ಜನರು ಪರದಾಡುತ್ತಿರುವಾಗ ಸಮೂಹ ಸಾರಿಗೆಯತ್ತ ಜನರನ್ನು ಸೆಳೆಯಲು ಸರ್ಕಾರ ಉತ್ತೇಜನಕರ ನೀತಿಯನ್ನು ಅಳವಡಿಸಿಕೊಳ್ಳಬೇಕು. ಆದರೆ, ಸರ್ಕಾರ ಮೆಟ್ರೋ ಸೇವೆಯಿಂದ ಜನರನ್ನು ವಿಮುಖಗೊಳಿಸುವ ನೀತಿಯನ್ನು ಅನುಸರಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ದುರಾದೃಷ್ಟಕರ ಸಂಗತಿಯೆಂದರೆ ಮೆಟ್ರೋ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ವಿಫಲವಾಗಿ ಯೋಜನಾ ವೆಚ್ಚವು ದುಪ್ಪಟ್ಟಾಗಿದೆ. ದುಬಾರಿ ವೆಚ್ಚದಿಂದ ಮೆಟ್ರೋ ಯೊಜನೆಯು ಕಾರ್ಯಸಾಧುವಲ್ಲದ ಹಾಗೆ ನಿರ್ವಹಣೆ ಮಾಡುವ ದುರವಸ್ಥೆಯಾಗಿದೆ ಎಂದು ಕಿಡಿಕಾರಿದೆ.

Share this article