ಮೈಕ್ರೋಫೈನಾನ್ಸ್‌ ಸುಗ್ರೀವಾಜ್ಞೆ ವಾಪಸ್‌ ಕಳುಹಿಸಿದ ಗೆಹಲೋತ್‌ - ಸಾಲ ಕೊಟ್ಟವರ ಹಕ್ಕುಗಳಿಗೆ ಇದು ವಿರುದ್ಧ

ಸಾರಾಂಶ

ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆ’ಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ವಾಪಸು ಕಳುಹಿಸಿದ್ದಾರೆ.

 ಬೆಂಗಳೂರು : ರಾಜ್ಯ ಸರ್ಕಾರ ಸಿದ್ಧ ಪಡಿಸಿದ್ದ ಮೈಕ್ರೋ ಫೈನಾನ್ಸ್‌ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳ ತಪ್ಪಿಸುವ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆ’ಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ವಾಪಸು ಕಳುಹಿಸಿದ್ದಾರೆ. ಈ ‘ಸುಗ್ರೀವಾಜ್ಞೆಯು ಸಹಜ ನ್ಯಾಯ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ನೋಂದಾಯಿತವಲ್ಲದ ಸಂಸ್ಥೆಗಳು ಹಾಗೂ ವ್ಯಕ್ತಿಗಳು ನೀಡಿರುವ ಸಾಲವನ್ನು ಸಾಲಗಾರರು ವಾಪಸ್‌ ನೀಡುವಂತಿಲ್ಲ ಎಂಬಂತಹ ಅಂಶವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಸಾಲ ವಸೂಲಾತಿಗೆ ನ್ಯಾಯಾಲಯದ ಮೊರೆ ಹೋಗಬಾರದು ಎಂದೂ ತಿಳಿಸಲಾಗಿದೆ. ಇದು ಸಾಲ ನೀಡಿದವರ ಸಂವಿಧಾನಬದ್ಧ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಸಾಲ ಪಡೆದವರ ಹಕ್ಕುಗಳ ರಕ್ಷಣೆ ಜತೆಗೆ ಸಾಲ ನೀಡುವವರ ಹಕ್ಕುಗಳ ರಕ್ಷಣೆಯೂ ಸರ್ಕಾರದ ಜವಾಬ್ದಾರಿ. ಆದರೆ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಸಾಲ ನೀಡುವವರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದಿಲ್ಲ. 5 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ಸಮಂಜಸವಲ್ಲ ಎಂಬುದು ಸೇರಿ ಆರು ಪ್ರಮುಖ ಆಕ್ಷೇಪಗಳನ್ನು ರಾಜ್ಯಪಾಲರು ಎತ್ತಿದ್ದಾರೆ. ಈ ಆಕ್ಷೇಪಣೆ ಹಾಗೂ ಕೋರಲಾದ ಸ್ಪಷ್ಟನೆಗೆ ವಿವರಣೆ ಜತೆ ಕಡತವನ್ನು ಮರು ಸಲ್ಲಿಕೆ ಮಾಡಿ ಎಂದು ಸರ್ಕಾರಕ್ಕೆ ವಾಪಸ್‌ ಕಳುಹಿಸಿಕೊಟ್ಟಿದ್ದಾರೆ.

ಇದೇ ವೇಳೆಯಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಬದಲು ಮುಂದಿನ ತಿಂಗಳ ಬಜೆಟ್‌ ಅಧಿವೇಶನದಲ್ಲಿ ಉಭಯ ಸನದಗಳಲ್ಲಿ ಕೂಲಂಕುಷವಾಗಿ ಚರ್ಚಿಸಿ ಬಳಿಕ ಸಂತ್ರಸ್ತರ ರಕ್ಷಣೆಗೆ ಪರಿಣಾಕಾರಿ ಕಾನೂನು ಜಾರಿಗೆ ತನ್ನಿ ಎಂಬ ಸಲಹೆಯನ್ನೂ ಅ‍ವರು ನೀಡಿದ್ದಾರೆ. ತನ್ಮೂಲಕ ಪರೋಕ್ಷವಾಗಿ ಸುಗ್ರೀವಾಜ್ಞೆ ಬೇಡ ಎಂಬ ಸಂದೇಶ ರವಾನಿಸಿದ್ದಾರೆ.

ರಾಜ್ಯಪಾಲರ ಆಕ್ಷೇಪಗಳೇನು?

1. ಸುಗ್ರೀವಾಜ್ಞೆಯ ಕಲಂ 14ರಲ್ಲಿ ನೋಂದಾಯಿತವಲ್ಲದ ಹಾಗೂ ಲೈಸನ್ಸ್‌ ಇಲ್ಲದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಸಾಲ ಹಾಗೂ ಬಡ್ಡಿಯಿಂದ ಸಾಲಗಾರನಿಗೆ ಮುಕ್ತಿ ನೀಡಲು ಎಂದು ಪ್ರಸ್ತಾಪಿಸಲಾಗಿದೆ. ಜತೆಗೆ ಸಾಲ, ಬಡ್ಡಿ ವಸೂಲಿ ಮಾಡುವ ಕುರಿತ ವ್ಯಾಜ್ಯಗಳನ್ನು ನ್ಯಾಯಾಲಯ ಪರಿಗಣಿಸುವಂತಿಲ್ಲ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನೂ ಕೈಬಿಡಬೇಕು ಎಂದು ಪ್ರಸ್ತಾಪಿಸಲಾಗಿದೆ. ಸಾಲ ಪಡೆದವರ ರಕ್ಷಣೆ ಸರ್ಕಾರದ ಕರ್ತವ್ಯ ನಿಜ. ಆದರೆ ಸಾಲ ನೀಡಿರುವ ವ್ಯಕ್ತಿಗಳ ಹಕ್ಕನ್ನೂ ಸರ್ಕಾರ ರಕ್ಷಿಸಬೇಕು. ಎಲ್ಲಾ ಸಾಲಗಳಿಂದ ವಿಮೋಚನೆಗೊಳಿಸಿದರೆ ಕಾನೂನು ಬದ್ಧ ಹಾಗೂ ನೈಜವಾಗಿ ಸಾಲ ನೀಡಿರುವ ವ್ಯಕ್ತಿಗಳು ತೊಂದರೆ ಅನುಭವಿಸಬಹುದು. ಸಾಲದ ವಸೂಲಾತಿಗೆ ಕಾನೂನಾತ್ಮಕ ಪರಿಹಾರಗಳಿಗಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುವ ಹಕ್ಕು ನಿರಾಕರಿಸಲಾಗದು.

2. ಸುಗ್ರೀವಾಜ್ಞೆಯ ಕಲಂ 8ನ್ನು ಉಲ್ಲಂಘಿಸಿದವರಿಗೆ 10 ವರ್ಷದವರೆಗೆ ವಿಸ್ತರಿಸಬಹುದಾದ ಶಿಕ್ಷೆ ಹಾಗೂ 5 ಲಕ್ಷ ರು. ದಂಡ ಹಾಗೂ ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ. ಕಿರು ಸಾಲ ಸಂಸ್ಥೆಗಳು ನೀಡುವ ಸಾಲವೇ 3 ಲಕ್ಷ ರು. ಹೀಗಿರುಗಾಗ 5 ಲಕ್ಷ ರು. ದಂಡ ವಿಧಿಸುವುದು ನೈಸರ್ಗಿಕ ನ್ಯಾಯವಲ್ಲ. ತತ್ಸಮಾನ ಅಪರಾಧಗಳಿಗೆ ಬೇರೆ ಕಾನೂನಿನಲ್ಲಿರುವ ಶಿಕ್ಷೆಗಿಂತ ಈ ಶಿಕ್ಷೆ ತುಂಬಾ ದುಬಾರಿ.

3. ಸಾಲ ನೀಡುವ ಸಂಸ್ಥೆಗಳು ತಾವು ನೀಡಿದ ಸಾಲಕ್ಕೆ ಯಾವುದೇ ಭದ್ರತೆ (ಅಡಮಾನ) ಪಡೆಯದಂತೆ ಮತ್ತು ಈಗಾಗಲೇ ಪಡೆದಿರುವ ಭದ್ರತೆ ಹಿಂತಿರುಗಿಸುವಂತೆ ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ಈ ನಿಬಂಧನೆ ಸರ್ಕಾರಿ ಬ್ಯಾಂಕುಗಳು ಅವಲಂಬಿಸುವ ಸಾಲದ ನಿಯಮ, ತತ್ವಗಳಿಗೆ ವಿರುದ್ಧವಾಗಿದೆ. ಇದು ಸಾಲ ನೀಡುವ ವ್ಯವಸ್ಥೆ ಮೇಲೆಯೇ ದೀರ್ಘಾವಧಿ ಪರಿಣಾಮ ಬೀರಲಿದ್ದು, ಸಾಲದ ವ್ಯವಹಾರಗಳಿಗೆ ಅಡ್ಡಿಯಾಗಲಿದೆ. ಸಮಾಜದಲ್ಲಿ ಸದ್ಭಾವನೆ ಮತ್ತು ಸ್ವಾಸ್ತ್ಯದ ಒಡನಾಟದ ಮೇಲೆ ಪರಿಣಾಮ ಬೀರುತ್ತದೆ. ಸಮಾಜದ ಕೆಳಸ್ತರದ ವ್ಯಕ್ತಿಗಳ ಬದುಕನ್ನು ಉನ್ನತಸ್ತರಕ್ಕೆ ಕೊಂಡೊಯ್ಯುವಲ್ಲಿ ಅತಿದೊಡ್ಡ ಪಾತ್ರ ನಿರ್ವಹಿಸುವ ಸ್ವಸಹಾಯ ಗುಂಪುಗಳ ವ್ಯಾಪಾರಿ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಂವಿಧಾನದ ಅನುಚ್ಛೇದ 19ರ ಅಡಿ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ.

4. ರಿಸರ್ವ್‌ ಬ್ಯಾಂಕ್‌ನೊಂದಿಗೆ ನೋಂದಾಯಿತವಾದ ಯಾವುದೇ ಬ್ಯಾಂಕಿಂಗ್‌ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಸುಗ್ರೀವಾಜ್ಞೆ ಅನ್ವಯವಾಗುವುದಿಲ್ಲ. ಆದ್ದರಿಂದ ಅನೇಕ ಸಾಲ ನೀಡುವ ಸಂಸ್ಥೆಗಳು ಸುಗ್ರೀವಾಜ್ಞೆ ವ್ಯಾಪ್ತಿಯಿಂದ ಹೊರಗಿವೆ. ಈ ಸುಗ್ರೀವಾಜ್ಞೆ ನೋಂದಾಯಿತವಲ್ಲದ ಮತ್ತು ಲೈಸೆನ್ಸ್‌ ಇಲ್ಲದ ಸಾಲ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ಸುಗ್ರೀವಾಜ್ಞೆ ಕೇವಲ ಆತ್ಮಸಾಕ್ಷಿ ಪ್ರಜ್ಞೆಯೊಂದಿಗೆ ವ್ಯವಹರಿಸುವ ನೈಜ ವ್ಯಕ್ತಿಗಳು ಹಾಗೂ ಪಾರಂಪರಿಕ ಪತ್ತಿನ ವ್ಯವಸ್ಥೆಗೆ ಅನ್ವಯವಾಗಲಿದೆ.

ಇನ್ನು ರಾಜ್ಯದಲ್ಲಿ ಪ್ರಸ್ತುತ ಲಭ್ಯವಿರುವ ಕಾಯ್ದೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕೊರತೆ ಮತ್ತು ಪೊಲೀಸ್‌ ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ ಸಮಸ್ಯೆಯಾಗುತ್ತಿದೆ. ದಕ್ಷ ಆಡಳಿತದಿಂದ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಇತರೆ ಕಾನೂನುಗಳಲ್ಲಿ ಇಂಥ ಅಪರಾಧಗಳನ್ನು ತಡೆಯಲು ಅವಕಾಶವಿಲ್ಲದಿದ್ದಾಗ ಸುಗ್ರೀವಾಜ್ಞೆ ತರುವುದು ಅಗತ್ಯ. ಆದರೆ ಬೇರೆ ಕಾನೂನುಗಳಲ್ಲಿ ಅವಕಾಶ, ಪರಿಹಾರ ಲಭ್ಯವಿರುವಾಗ ಸುಗ್ರೀವಾಜ್ಞೆ ಅಗತ್ಯವಿಲ್ಲ.

5. ದೌರ್ಜನ್ಯಗಳನ್ನು ತಡೆಯಲು ಸುಗ್ರೀವಾಜ್ಞೆ ಹೇಗೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಅಂಕಿ-ಅಂಶಗಳೊಂದಿಗೆ ವಿವರಣೆ ಅಥವಾ ಕಾನೂನು ಸಲಹೆ ಮೂಲಕ ಯಾವುದೇ ರೀತಿಯ ಶಿಫಾರಸನ್ನು ಸುಗ್ರೀವಾಜ್ಞೆ ಕಡತದಲ್ಲಿ ನೀಡಿಲ್ಲ.

6. ಮತ್ತೊಂದು ಮುಖ್ಯ ಅಂಶವೆಂದರೆ ಸುಗ್ರೀವಾಜ್ಞೆಯು ಸಾಲ ಪಡೆದ ವರ್ಗಕ್ಕೆ ನೆರವಾಗುತ್ತದೆ. ಅದೇ ಸಮಾಜದ ಭಾಗವಾಗಿರುವ ಸಾಲ ನೀಡುವವರ ಹಿತಾಸಕ್ತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಈ ವಿಷಯವು ವಿಧಾನಮಂಡಲದಲ್ಲಿ ವ್ಯಾಪಕವಾಗಿ ಚರ್ಚಿಸಬೇಕು. ಅವಸರದಲ್ಲಿ ಸುಗ್ರೀವಾಜ್ಞೆ ತರುವ ಬದಲು ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬಜೆಟ್‌ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ಬಳಿಕ ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿಯಾದ ಶಾಸನ ರೂಪಿಸುವುದು ಸೂಕ್ತ.

- 6 ಆಕ್ಷೇಪ ಎತ್ತಿ ಸುಗ್ರೀವಾಜ್ಞೆ ಮರಳಿಸಿದ ರಾಜ್ಯಪಾಲ

1. ನೋಂದಾಯಿತವಲ್ಲದ ಸಂಸ್ಥೆಯಿಂದ ಸಾಲ ಮಾಡಿದ್ದರೆ ಮನ್ನಾ ಬಗ್ಗೆ ಪ್ರಸ್ತಾಪವಿದೆ. ಇದರಿಂದ ಸಾಲ ಕೊಟ್ಟವರಿಗೆ ತೊಂದರೆ ಆಗುತ್ತೆ

2. 5 ಲಕ್ಷ ರು. ದಂಡದ ಪ್ರಸ್ತಾಪವಿದೆ. ಮೈಕ್ರೋಫೈನಾನ್ಸ್‌ ಸಂಸ್ಥೆಗಳು ನೀಡುವ ಸಾಲವೇ 3 ಲಕ್ಷ. ಹೀಗಾಗಿ 5 ಲಕ್ಷ ದಂಡ ನ್ಯಾಯವಲ್ಲ

3. ಸಾಲ ಕೊಟ್ಟ ಸಂಸ್ಥೆಗಳು ಯಾವುದೇ ಅಡಮಾನ ಪಡೆಯದಂತೆ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾಗಿದೆ. ಸಾಲ ವ್ಯವಹಾರಕ್ಕೆ ಇದು ಅಡ್ಡಿ

4. ದಕ್ಷ ಆಡಳಿತದ ಸಮಸ್ಯೆ ನಿಯಂತ್ರಿಸಬಹುದು. ಬೇರೆ ಕಾನೂನಲ್ಲಿ ಅವಕಾಶ, ಪರಿಹಾರ ಲಭ್ಯವಿದೆ. ಹೀಗಾಗಿ ಸುಗ್ರೀವಾಜ್ಞೆ ಅಗತ್ಯವಿಲ್ಲ

5. ಮೈಕ್ರೋಫೈನಾನ್ಸ್‌ ದೌರ್ಜನ್ಯ ತಡೆಯಲು ಸುಗ್ರೀವಾಜ್ಞೆ ಹೇಗೆ ಅನುಕೂಲವಾಗುತ್ತೆಂದು ಅಂಕಿ-ಅಂಶಗಳೊಂದಿಗೆ ವಿವರಣೆ ನೀಡಿಲ್ಲ

6. ಅವಸರದಲ್ಲಿ ಸುಗ್ರೀವಾಜ್ಞೆ ತರುವ ಬದಲು ಮಾರ್ಚ್‌ನಲ್ಲಿ ನಡೆಯುವ ಬಜೆಟ್‌ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಬೇಕು

Share this article