ಪೊಲೀಸ್‌ ಕ್ಯಾಂಟೀನ್‌ ಮಾದರೀಲಿ ನೌಕರರಿಗೆ ಸೂಪರ್‌ ಮಾರ್ಕೆಟ್‌?

| N/A | Published : Oct 16 2025, 10:42 AM IST / Updated: Oct 16 2025, 10:43 AM IST

super market

ಸಾರಾಂಶ

ಪೊಲೀಸ್‌ ಮತ್ತು ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಲು ಎಂಎಸ್‌ಐಎಲ್‌ನಿಂದ ಸೂಪರ್‌ ಮಾರ್ಕೆಟ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

 ಬೆಂಗಳೂರು :  ಪೊಲೀಸ್‌ ಮತ್ತು ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಲು ಎಂಎಸ್‌ಐಎಲ್‌ನಿಂದ ಸೂಪರ್‌ ಮಾರ್ಕೆಟ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಖನಿಜ ಭವನದಲ್ಲಿ ಬುಧವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿ, ಅರೆ ಸೇನಾ ಪಡೆಗಳ ನೌಕರರು ಮತ್ತು ರಾಜ್ಯದ ಪೊಲೀಸ್‌ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳ ಪೂರೈಕೆಗೆ ಕ್ಯಾಂಟೀನ್‌ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದ 6 ಲಕ್ಷ ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳ ಪೂರೈಕೆಗೆ ಸೂಪರ್‌ ಮಾರ್ಕೆಟ್‌ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಅದಕ್ಕೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆಯುವ ಸಂಬಂಧ ಆರ್ಥಿಕ ಇಲಾಖೆ ಜತೆಗೆ ಚರ್ಚಿಸಬೇಕು. ಸೂಪರ್‌ ಮಾರ್ಕೆಟ್‌ ಸ್ಥಾಪನೆಯ ಸಾಧ್ಯಾಸಾಧ್ಯತೆ ಕುರಿತು ಒಂದು ತಿಂಗಳಲ್ಲಿ ವಿಸ್ತೃತ ವರದಿ ನೀಡುವಂತೆ ಎಂಎಸ್‌ಐಎಲ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಉದ್ದೇಶಿತ ಸೂಪರ್‌ ಮಾರ್ಕೆಟ್‌ನಲ್ಲಿ ದವಸ-ಧಾನ್ಯದಿಂದ ಎಫ್‌ಎಂಸಿಜಿ ವಲಯದಲ್ಲಿನ ಪ್ರತಿ ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯುವ ಆಲೋಚನೆಯಿದೆ. ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಈ ಸೌಲಭ್ಯ ವಿಸ್ತರಿಸಲಾಗುವುದು. ಅಧ್ಯಯನ ವರದಿ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಎಂಎಸ್ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ನಿರ್ದೇಶಕ ಚಂದ್ರಪ್ಪ ಇತರರಿದ್ದರು.

Read more Articles on