ಉಳ್ಳಾಲ ದಸರಾಕ್ಕೆ ಪೊಲೀಸ್‌ ಕಪ್ಪುಚುಕ್ಕೆ: ಜಗದೀಶ್‌ ಆಳ್ವ

| Published : Oct 09 2025, 02:01 AM IST

ಉಳ್ಳಾಲ ದಸರಾಕ್ಕೆ ಪೊಲೀಸ್‌ ಕಪ್ಪುಚುಕ್ಕೆ: ಜಗದೀಶ್‌ ಆಳ್ವ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯವಸ್ಥಿತವಾಗಿ ಜರಗುವ ಉಳ್ಳಾಲ ಶಾರದೋತ್ಸವಕ್ಕೆ ಜಿಲ್ಲೆಯಲ್ಲೇ ಕಪ್ಪು ಚುಕ್ಕೆ ತರುವ ಕೆಲಸ ಪೊಲೀಸ್‌ ಅಧಿಕಾರಿಗಳಿಂದ ಆಗಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು ಆರೋಪಿಸಿದ್ದಾರೆ.

ಉಳ್ಳಾಲ: ವ್ಯವಸ್ಥಿತವಾಗಿ ಜರಗುವ ಉಳ್ಳಾಲ ಶಾರದೋತ್ಸವಕ್ಕೆ ಜಿಲ್ಲೆಯಲ್ಲೇ ಕಪ್ಪು ಚುಕ್ಕೆ ತರುವ ಕೆಲಸ ಪೊಲೀಸ್‌ ಅಧಿಕಾರಿಗಳಿಂದ ಆಗಿದೆ. ದೈವ-ದೇವರ ಪ್ರಿಯವಾದ ತಾಸೆಯ ಕೋಲುಗಳನ್ನು ಕಿತ್ತೆಸೆಯುವ ಕೃತ್ಯದಿಂದ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗಿನವರೆಗೆ ಶಾರದಾ ಮೂರ್ತಿಯನ್ನು ಇರಿಸಿ ಬಳಿಕ ವಿಸರ್ಜನೆ ಮಾಡಿರುವುದು ಸಮಸ್ತ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು ಹೇಳಿದ್ದಾರೆ.

ತೊಕ್ಕೊಟ್ಟಿನಲ್ಲಿ ಬಿಜೆಪಿ ಮಂಗಳೂರು ಮಂಡಲ ವತಿಯಿಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆರಳೆಣಿಕೆ ಪೊಲೀಸರಿಂದ ಹಿರಿಯ ಅಧಿಕಾರಿಗಳಿಗೆ ಕೆಟ್ಟ ಹೆಸರು ತರುವ ಕೆಲಸವಾಗಿದೆ. 30 ಮಂದಿ ಹಾಗೂ ಇತರರ ವಿರುದ್ಧ ಕೇಸು ದಾಖಲಿಸಲಾಗಿದೆ. ಕೇಸುಗಳನ್ನು ಹಿಂಪಡೆದುಕೊಂಡು ತಪ್ಪಿತಸ್ಥ ಅಧಿಕಾರಿಗಳನ್ನು ಠಾಣೆಯಿಂದ ವರ್ಗಾಯಿಸಬೇಕು ಎಂದರು.ಬಿಜೆಪಿ ಮಂಡಲ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಮಾತನಾಡಿ, ಸುಪ್ರೀಮ್ ಕೋರ್ಟ್ ನಿರ್ದೇಶನ ಪ್ರಕಾರ ಆರೋಪಿಗೆ ನೋಟೀಸು ಕೊಟ್ಟು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೇಸು ದಾಖಲಿಸಬೇಕು. ಆದರೆ ಆರೋಪಿ ರಕ್ಷಿತ್ ನನ್ನು ಮುಂಜಾನೆ ಎರಡು ಗಂಟೆಗೆ ಏಕಾಏಕಿ ಬಂಧಿಸಿ, ಏಳು ಗಂಟೆಗೆ ತರಾತುರಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಮತ್ತಿಬ್ಬರು ಯುವಕರನ್ನು ಮಧ್ಯರಾತ್ರಿಯೇ ಬಿಟ್ಟು ಕಳುಹಿಸಿದ್ದು, ಘಟನೆ ಖಂಡಿಸಿ ಠಾಣೆ ಮುಂದೆ ಜಮಾಯಿಸಿದ್ದ ಮೂವತ್ತು ಮಂದಿ ಮತ್ತು ಇತರರ ಮೇಲೆ ಕೇಸು ದಾಖಲಿಸಲಾಗಿದೆ. ವಾರದೊಳಗೆ ಈ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿ ಇದರ ವಿರುದ್ಧ ಗಂಭೀರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷರಾದ ಯಶವಂತ್ ಅಮೀನ್ ಮಾತನಾಡಿ, ಉಳ್ಳಾಲದ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿರುವುದು ಶಾರದೋತ್ಸವ ಗಲಾಟೆಗೆ ಪಿಎಸ್ಐಗಳಾದ ಕೃಷ್ಣ ಮತ್ತು ಸಂತೋಷ್ ಅವರೇ ನೇರ ಕಾರಣ. ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದಲ್ಲೂ ಇವರ ದುರ್ವರ್ತನೆಯಿಂದಲೇ ಗಲಾಟೆ ನಡೆದಿತ್ತು. ಈ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಉಳ್ಳಾಲ ಮೊಗವೀರ ಸಮಾಜದ ಮುಖಂಡ ಬಾಬು ಬಂಗೇರ, ಬಿಜೆಪಿ ಯುವಮೋರ್ಚದ ಜಿಲ್ಲಾ ಉಪಾಧ್ಯಕ್ಷ ನಿಶಾಂತ್ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.