ನಗರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕಸವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕಸವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣಾ 2025-26 ಅಂಗವಾಗಿ ಮಂಗಳವಾರ ಅಂಜನಾಪುರ ವಾರ್ಡ್‌ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರೊಂದಿಗೆ ‘ಚಹಾ ಸಂವಾದ ನಡೆಸಿ ಮಾತನಾಡಿದ ಅವರು, ಪ್ರತಿದಿನ 520 ಮೆಟ್ರಿಕ್ ಟನ್ ಕಡಿಮೆ ಪ್ಲಾಸ್ಟಿಕ್ (ಆರ್.ಡಿ.ಎಫ್) ಸಂಗ್ರಹಿಸಿ ಸಿಮೆಂಟ್ ತಯಾರಿಕಾ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಆದಾಯ ಬರುತ್ತಿದೆ. ಆದಾಯವನ್ನು ಇನ್ನಷ್ಟು ಹೆಚ್ಚಿಸಿ ಕಸ ನಿರ್ವಹಣೆ ಮತ್ತಷ್ಟು ಉತ್ತಮಗೊಳಿಸಲು ಮನೆಗಳಲ್ಲಿಯೇ ಒಣ ಕಸ ಮತ್ತು ಹಸಿ ಕಸವನ್ನು ವಿಂಗಡಿಸಿದರೆ ಹೆಚ್ಚಿನ ಅನುಕೂಲ ಆಗುತ್ತದೆ. ಹೆಚ್ಚುವರಿ ಪ್ಲಾಸ್ಟಿಕ್ ಅನ್ನು ಡಾಂಬರೀಕರಣಕ್ಕೆ ಬಳಸಿಕೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಲ್ಲ ವಾರ್ಡ್‌ಲ್ಲೂ ಒಣ ತ್ಯಾಜ್ಯ ಘಟಕ:

ಜಿಬಿಎ ವ್ಯಾಪ್ತಿಯಲ್ಲಿ ಈಗಾಗಲೇ 190 ಸ್ಥಳಗಳಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಿವೆ. ಪ್ರತಿಯೊಂದು ವಾರ್ಡ್‌ಗೆ ಒಂದರಂತೆ 369 ವಾರ್ಡ್‌ಗಳಲ್ಲಿಯೂ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಯಾವ ವಾರ್ಡ್‌ಗಳಲ್ಲಿ ಘಟಕಗಳ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಸ್ಥಳಗಳನ್ನು ಗುರುತಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅಂಜನಾಪುರ ವ್ಯಾಪ್ತಿಯ ಒಣ ತ್ಯಾಜ್ಯ ಸಂಗ್ರಹಣಾ ಘಟಕದ ಬಳಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ, ಆರ್‌.ಆರ್‌.ಆರ್ ಕೇಂದ್ರ, ಬಯೋಮಿಥನೈಜೇಶನ್ ಪ್ಲಾಂಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಲು ಸುಮಾರು 1.20 ಎಕರೆ ಖಾಲಿ ಜಾಗ ಲಭ್ಯವಿದೆ. ಕಟ್ಟಡ ನಿರ್ಮಾಣ ಭಗ್ನಾವಶೇಷಗಳ ಸಂಸ್ಕರಣೆ ಮತ್ತು ಬಯೋಮಿಥನೈಜೇಶನ್ ಪ್ಲಾಂಟ್ ನಿರ್ಮಾಣ ಮಾಡುವ ಯೋಜನೆಯಿದೆ. ಈ ಸಂಬಂಧ ಸಮಗ್ರ ಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.

ಪೌರ ಕಾರ್ಮಿಕರಿಗೆ ಸುವಿಧಾ ಕ್ಯಾಬಿನ್:

ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಸುವಿಧಾ ಕ್ಯಾಬಿನ್‌ಗಳನ್ನು ನಿರ್ಮಿಸಬೇಕು. ಜೊತೆಗೆ ಕಣ್ಗಾವಲಿಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮಹೇಶ್ವರ ರಾವ್ ಸೂಚನೆ ನೀಡಿದರು. ಈ ವೇಳೆ ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.