ಆಲೆಮನೆ ಬಳಿ ಪ್ಲಾಸ್ಟಿಕ್ ಸಂಗ್ರಹಣೆಗೆ ಆಕಸ್ಮಿಕ ಬೆಂಕಿ ತಗುಲಿ ಗುಜರಿ ವಸ್ತುಗಳು ಸೇರಿದಂತೆ ಪಕ್ಕದ ಜಮೀನಿನಲ್ಲಿರುವ ತೆಂಗು, ಕಬ್ಬಿನ ಗದ್ದೆಯಲ್ಲಿ ಅಪಾರ ನಷ್ಟ ಉಂಟಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಂಗಾರ್ ಕೊಪ್ಪಲು ಗ್ರಾಮದ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆಲೆಮನೆ ಬಳಿ ಪ್ಲಾಸ್ಟಿಕ್ ಸಂಗ್ರಹಣೆಗೆ ಆಕಸ್ಮಿಕ ಬೆಂಕಿ ತಗುಲಿ ಗುಜರಿ ವಸ್ತುಗಳು ಸೇರಿದಂತೆ ಪಕ್ಕದ ಜಮೀನಿನಲ್ಲಿರುವ ತೆಂಗು, ಕಬ್ಬಿನ ಗದ್ದೆಯಲ್ಲಿ ಅಪಾರ ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಕೆಂಗಾರ್ ಕೊಪ್ಪಲು ಗ್ರಾಮದ ಬಳಿ ನಡೆದಿದೆ.ಕಿರಂಗೂರು ಸರ್ವೇ ನಂ 572ರ ದರಸಗುಪ್ಪೆ ಗ್ರಾಮದ ಕೆಂಪೇಗೌಡರಿಗೆ ಸೇರಿದ ಜಮೀನಿನ ಕಬ್ಬಿನ ಆಲೆಮನೆಯ ಆವರಣದಲ್ಲಿ ಸುರಿದಿದ್ದ ಪ್ಲಾಸ್ಟಿಕ್ ಸಂಗ್ರಹಣೆಯ ಸರಕು ಘಟಕಕ್ಕೂ ಬೆಂಕಿ ಬಿದ್ದು ನಂತರ ಆಲೆಮನೆಯಗೂ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗೆ ಆಗುತಿಯಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗೆ ಬೆಂಕಿ ಹತ್ತಿಕೊಂಡು ಧಗಧಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿ ಜ್ವಾಲೆ ಹಾಗೂ ದಟ್ಟ ಹೊಗೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಆತಂಕಕ್ಕೀಡು ಮಾಡಿತ್ತು. ಮೈಸೂರು, ಕೇರಳ ಸೇರಿದಂತೆ ವಿವಿಧೆಡೆಯಿಂದ ಲಾರಿ ಮೂಲಕ ತ್ಯಾಜ್ಯವನ್ನು ಕಳೆದ ಎರಡು ವರ್ಷಗಳಿಂದ ಆಲೆಮನೆಗಳಿಗೆ ತಂದು ಇಲ್ಲಿ ಸುರಿದು ಸಂಗ್ರಹಣೆ ಮಾಡಲಾಗುತ್ತಿತ್ತು.ಬೆಂಕಿ ಕೆನ್ನಾಲಿಗೆ ಆಲೆಮನೆಯ ಲಕ್ಷಾಂತರ ರು.ಗಳ ಯಂತ್ರೋಪಕರಣ, ಪಕ್ಕದ ಜಮೀನಿನ ಕಬ್ಬು ಬೆಳೆ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಿಯ ಪೊಲೀಸ್ ಠಾಣೆ ಹಾಗೂ ಅಗ್ನಿ ಶಾಮಕ ದಳದವರಿಗೆ ತಿಳಿಯುವಷ್ಟರಲ್ಲಿ ಮುಗಿಲೆತ್ತರಕ್ಕೆ ದಟ್ಟ ಹೊಗೆ ಕಾಣಿಸಿಕೊಂಡು ಬೆಂಕಿ ಕೆನ್ನಾಲಿಗೆ ಆಕಾಶದೆತ್ತರವಾಗಿತ್ತು. ನಂತರ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ನೀರೆರಚಿದರೂ ಬೆಂಕಿ ನಂದಿಸಿದರೂ ಪ್ರಯೋಜನವಾಗದೆ ಸಂಪೂರ್ಣ ಪ್ಲಾಸ್ಟಿಕ್ ರಾಶಿ ಬೆಂದು ಹೋಗಿತ್ತು.
ರೈತ ಕೆಂಪೇಗೌಡ ಆಲೆಮನೆ ಹಾಗೂ ಪ್ಲಾಸ್ಟಿಕ್ ಗುಜುರಿ ಘಟಕ ತೆರೆಯಲು ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಬಾಡಿಗೆಗೆ ನೀಡಿ ಗುಜರಿ ವ್ಯಾಪಾರ ನಡೆಸುತಿದ್ದರು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಶ್ರಮ ವಹಿಸಿ ಕೊನೆವರೆಗೂ ಬೆಂಕಿ ಜ್ವಾಲೆ ವಿರುದ್ಧ ನೀರಿನ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಆಲೆಮನೆ ಬಳಿ ರಾಶಿಗಟ್ಟಲೆ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ ಬಗ್ಗೆ ಸಾರ್ವಜನಿಕರು, ಅಕ್ಕ ಪಕ್ಕದ ಜಮೀನಿನವರು ಹಾಗೂ ಗ್ರಾಮದ ಗ್ರಾಮಸ್ಥರು ಪ್ಲಾಸ್ಟಿಕ್ ಗುಜರಿಯಿಂದ ಅಪಾರ ವಾಸನೆ ಹಾಗೂ ಪರಿಸರ ಹಾನಿ ಸೇರಿದಂತೆ ಇತರ ಅನಾಹುತಗಳ ಕುರಿತು ಮೊದಲೇ ಸ್ಥಳೀಯ ಪಂಚಾಯ್ತಿ ಹಾಗೂ ತಹಸೀಲ್ದಾರ್ ಅವರಿಗೆ ದೂರು ಸಹ ನೀಡಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮರೀಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದಾರೆ.