ಹಲವು ವರ್ಷಗಳಿಂದ ದೇವೇಗೌಡರ ಪುತ್ರ ನಾಗೇಶ್ ಕಬ್ಬಿನ ಆಲೆಮನೆ ನಿರ್ಮಿಸಿ ಬೆಲ್ಲ ತಯಾರಿಸುತ್ತಿದ್ದಾರೆ. ಬೆಲ್ಲ ತೆಗೆಯಲು ಹಾಕುವ ಬೆಂಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್, ಚಪ್ಪಲಿ ಚೂರು ಸೇರಿದಂತೆ ಇತರ ತ್ಯಾಜ್ಯಗಳ ಬಳಕೆ ಮಾಡುತ್ತಿದ್ದಾರೆ. ಇದರಿಂದ ಬರುವ ಹೊಗೆ ಗ್ರಾಮದೆಲ್ಲೆಡೆ ಹರಡಿ ಗ್ರಾಮದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಚಿನ್ನಗಿರಿ ಕೊಪ್ಪಲು ಗ್ರಾಮದ ಮಧ್ಯೆ ಇರುವ ಆಲೆಮನೆಯಿಂದ ಬರುವ ಹೊಗೆಯಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಬರುತ್ತಿವೆ ಎಂದು ಆರೋಪಿಸಿ ಗ್ರಾಮಸ್ಥರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಪಟ್ಟಣದ ತಾಲೂಕು ಕಚೇರಿ ಎಂದುರು ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿದ ಗ್ರಾಮಸ್ಥರು, ಹಲವು ವರ್ಷಗಳಿಂದ ದೇವೇಗೌಡರ ಪುತ್ರ ನಾಗೇಶ್ ಕಬ್ಬಿನ ಆಲೆಮನೆ ನಿರ್ಮಿಸಿ ಬೆಲ್ಲ ತಯಾರಿಸುತ್ತಿದ್ದಾರೆ. ಬೆಲ್ಲ ತೆಗೆಯಲು ಹಾಕುವ ಬೆಂಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್, ಚಪ್ಪಲಿ ಚೂರು ಸೇರಿದಂತೆ ಇತರ ತ್ಯಾಜ್ಯಗಳ ಬಳಕೆ ಮಾಡುತ್ತಿದ್ದಾರೆ. ಇದರಿಂದ ಬರುವ ಹೊಗೆ ಗ್ರಾಮದೆಲ್ಲೆಡೆ ಹರಡಿ ಗ್ರಾಮದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡಿಕೊಂಡಿದೆ ಎಂದು ದೂರಿದರು.
ಈ ಕುರಿತು ಹಲವಾರು ಬಾರಿ ತಾಲೂಕು ಕಚೇರಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಆಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ಹಾಗೂ ಪರಿಸರ ನೈರ್ಮಲ್ಯ ಇಲಾಖೆ ಅಧಿಕಾರಿಗಳ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಅಕ್ರಮವಾಗಿ ನಿರ್ಮಿಸಿರುವ ಆಲೆ ಮನೆಯನ್ನು ತೆರವು ಮಾಡಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿ.ಬಿ. ಮಂಜುನಾಥ್, ಕೋಡಿಶೆಟ್ಟಿಪುರ ತೇಜಸ್, ನೀಲನಕೊಪ್ಪಲು ಮಹೇಶ್, ಚರಣ್, ದಿವ್ಯಾ, ಕಾವ್ಯ, ಆನಂದ್, ಜಯಂತ್ ಸೇರಿದಂತೆ ಇತರರು ಭಾಗವಹಿಸಿ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿದರು.