ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ್ದ ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ (ಎಚ್‌ಎಸ್ಆರ್) ಯೋಜನೆ ಅನುಷ್ಠಾನಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಬೆಂಗಳೂರು : ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ್ದ ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ (ಎಚ್‌ಎಸ್ಆರ್) ಯೋಜನೆ ಅನುಷ್ಠಾನಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಜತೆಗೆ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರು. ಕ್ರಿಯಾ ಯೋಜನೆಗೂ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರವು ದಕ್ಷಿಣದ ಎರಡು ಮಹಾನಗರಗಳನ್ನು ಪ್ರಾದೇಶಿಕವಾಗಿ ಒಗ್ಗೂಡಿಸಿ ಆರ್ಥಿಕ ಬೆಳವಣಿಗೆಗೆ ದೊಡ್ಡಮಟ್ಟದಲ್ಲಿ ಬೂಸ್ಟ್ ನೀಡುವ ಉದ್ದೇಶದಿಂದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಘೋಷಿಸಿದೆ. ಈ ಯೋಜನೆಗೆ ಅಗತ್ಯವಾದ 176 ಹೆಕ್ಟೇರ್ ಸ್ವಾಧೀನ ಮತ್ತು ಅಗತ್ಯ ಸಹಕಾರಕ್ಕಾಗಿ ಕೇಂದ್ರ ರೈಲ್ವೆ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಿ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದರು. ಇದೀಗ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ.
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ 600 ಕೋಟಿ ರು.:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ಕಾಲೋನಿಗಳ ಅಭಿವೃದ್ಧಿಗೆ 2026-27 ಮತ್ತು 2027-28ನೇ ಸಾಲಿಗೆ ವಿವಿಧ ಕಾಮಗಾರಿಗಳ ಕುರಿತು ಸಿದ್ಧಪಡಿಸಿರುವ ಕ್ರಿಯಾಯೋಜನೆಗೆ ಸಂಪುಟ ಸಭೆ ಅಂಗೀಕಾರ ನೀಡಲಿದೆ.
ರಾಮನಗರದಲ್ಲಿ ಗ್ರೇಟರ್ ಬೆಂಗಳೂರು ಉಪನಗರ:
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ 9 ಗ್ರಾಮಗಳ 7481 ಎಕರೆ ಪ್ರದೇಶದಲ್ಲಿ 18,104 ಕೋಟಿ ರು. ವೆಚ್ಚದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಅನುಷ್ಠಾನಗೊಳಿಸಲು ಗುರುವಾರ ಸಂಪುಟ ಸಭೆಯ ಎದುರು ವಿಷಯ ಮಂಡನೆಯಾಗಲಿದೆ.
ಕಳೆದ ಏ.17ರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ವಿವರಣೆ ಬಯಸಿ ಸಂಪುಟಸಭೆಯು ವಿಷಯ ಮುಂದೂಡಿತ್ತು.
ವಿಮಾನ ಸೇವೆಗೆ ವಿಶೇಷ ಪ್ರೋತ್ಸಾಹಧನ:
ರಾಜ್ಯದ ಪ್ರಮುಖ ನಗರಗಳ ನಡುವೆ ವಿಮಾನ ಸೇವೆ ನಿರ್ವಹಣೆಯನ್ನು ಉತ್ತೇಜಿಸಲು ಸರಕಾರ ಉದ್ದೇಶಿಸಿದೆ. ಅದಕ್ಕಾಗಿ ವಿಶೇಷ ಪ್ರೋತ್ಸಾಹಧನ ನೀಡಲು ಪ್ರಸ್ತಾಪಿಸಿದೆ. ಪ್ರಮುಖವಾಗಿ ಬೆಂಗಳೂರು-ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಕಲಬುರಗಿ-ಬೆಂಗಳೂರು ನಡುವೆ ವಿಮಾನ ಸೇವೆ ನಿರ್ವಹಣೆಗೆ ವಾರ್ಷಿಕ 28.47 ಕೋಟಿ ರು. ಪ್ರೋತ್ಸಾಹಧನ ನೀಡಲು ಪ್ರಸ್ತಾಪಿಸಲಾಗಿದೆ.
ಹೆಚ್ಚುವರಿ ಪಟ್ಟಿಯಲ್ಲಿ ಪ್ರಮುಖ ವಿಷಯ ಮಂಡನೆ?:
ಸಂಪುಟ ಸಭೆಯ ಹೆಚ್ಚುವರಿ ಅಜೆಂಡಾದಲ್ಲಿ ಮತ್ತಷ್ಟು ಪ್ರಮುಖ ವಿಷಯಗಳನ್ನು ಮಂಡಿಸಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬೃಹತ್ ಬಂಡವಾಳ ಹೂಡಿಕೆ ಮಾಡುವ ವಿವಿಧ ಕಂಪೆನಿಗಳ 13 ಹೂಡಿಕೆ ಪ್ರಸ್ತಾವನೆಗಳಿಗೆ ವಿಶೇಷ ರಿಯಾಯಿತಿ ಮತ್ತು ಉತ್ತೇಜನಗಳನ್ನು (ಇನ್ಸೆಂಟಿವ್ಸ್) ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಧರಿಸಲಾಗಿದೆ. ಈ ವಿಷಯ ಸೇರಿ ಕೆಲ ಪ್ರಮುಖ ವಿಷಯ ಪ್ರಸ್ತಾಪವಾಗಬಹುದು ಎಂದು ಮೂಲಗಳು ತಿಳಿಸಿವೆ.
- ರಾಮನಗರ ತಾಲೂಕಿನ 9 ಗ್ರಾಮಗಳ 7481 ಎಕರೆ ಪ್ರದೇಶದಲ್ಲಿ 18,104 ಕೋಟಿ ರು. ವೆಚ್ಚದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅನುಷ್ಠಾನ ಬಗ್ಗೆ ವಿಷಯ ಮಂಡನೆ
- ಬೆಂಗಳೂರು-ಬೀದರ್, ಬೆಂಗಳೂರು- ಕಲಬುರಗಿ ನಡುವೆ ವಿಮಾನ ಸೇವೆ ನಿರ್ವಹಣೆಗೆ ವಾರ್ಷಿಕ 28.47 ಕೋಟಿ ರು. ಪ್ರೋತ್ಸಾಹಧನಕ್ಕೆ ಪ್ರಸ್ತಾಪ
- ಬೃಹತ್ ಬಂಡವಾಳ ಹೂಡಿಕೆ ಮಾಡುವ ವಿವಿಧ ಕಂಪನಿಗಳ 13 ಹೂಡಿಕೆ ಪ್ರಸ್ತಾವನೆಗಳಿಗೆ ವಿಶೇಷ ರಿಯಾಯಿತಿ ಮತ್ತು ಇಂಟೆನ್ಸಿವ್ ನೀಡುವ ವಿಷಯ ಸೇರಿ ಕೆಲ ಪ್ರಮುಖ ವಿಷಯ ಪ್ರಸ್ತಾಪ
