ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನ (ಬಿಇಎಂಎಲ್) ಆದಿತ್ಯ ಪ್ಲಾಟ್‌ನಲ್ಲಿ ದೇಶದ ಮೊದಲ ಬಿ28 ಬುಲೆಟ್ ರೈಲಿನ ಬೋಗಿಗಳು ವಿನ್ಯಾಸಗೊಳಿಸಲಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಮೊದಲ ಮಾದರಿ (ಪ್ರೊಟೊಟೈಪ್) ನಿರೀಕ್ಷಿಸಲಾಗಿದ್ದು, 2027ರ ಅಂತ್ಯಕ್ಕೆ ಸಂಪೂರ್ಣ ಸಿದ್ಧಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.ಶನಿವಾರ ನಗರದ ಬಿಇಎಂಎಲ್‌ನಲ್ಲಿ ನಿರ್ಮಿಸಲಾಗಿರುವ ಆದಿತ್ಯ ಹೈಸ್ಪೀಡ್ ಬುಲೆಟ್ ರೈಲು ಬಿ28 ಬೋಗಿ ಉತ್ಪಾದನಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಬಿಇಎಂಎಲ್ ಸಹಯೋಗದಲ್ಲಿ ಬುಲೆಟ್ ರೈಲು ಬಿ28 ಬೋಗಿಗಳನ್ನು ವಿನ್ಯಾಸಗೊಳ್ಳುತ್ತಿದೆ. ಇದು ಆತ್ಮನಿರ್ಭರ ಭಾರತದ ಸ್ವದೇಶಿ ಬುಲೆಟ್ ರೈಲು ಆಗಿರಲಿದೆ. ಬಿಇಎಂಎಲ್ ನ ಆದಿತ್ಯ ಘಟಕದಲ್ಲಿ ಇದರ ಉತ್ಪಾದನೆ ನಡೆಯಲಿದೆ ಎಂದರು.
ಹೈ ಸ್ಪೀಡ್ ರೈಲುಗಳು ದೊಡ್ಡ ಪರಿವರ್ತನೆ ತರಲಿದ್ದು, ಈಗಾಗಲೇ ಘೋಷಣೆಯಾಗಿರುವ ಬೆಂಗಳೂರು-ಚೆನ್ನೈ ರೈಲು ಪ್ರಯಾಣದ ಸಮಯ ಕೇವಲ 73 ನಿಮಿಷ ಆಗಿರಲಿದೆ. ಇದು ಎರಡು ನಗರಗಳ ನಡುವಿನ ಸಂಪರ್ಕ ಜಾಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಮಡಗಾಂವ್ ವರೆಗೆ ರೈಲು ಸೇವೆಯನ್ನು ಯೋಜಿಸಲಾಗಿದೆ ಎಂದು ಹೇಳಿದರು.ಬೆಂಗಳೂರು ಉಪನಗರ ರೈಲು ಯೋಜನೆಯ ಕೆಲಸಗಳು ಸಹ ಪ್ರಗತಿಯಲ್ಲಿದೆ. ಇದು ತಾಂತ್ರಿಕ ಕಾರ್ಯವಾಗಿದ್ದರಿಂದ, ತಾಂತ್ರಿಕ ಪರಿಣಿತರನ್ನು ಇದರ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಸತೀಶ್‌ಕುಮಾರ್, ಬಿಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್, ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ.ರವೀಂದ್ರ ಸೇರಿದಂತೆ ಇತರರಿದ್ದರು.