ಸೂಲಿಬೆಲೆ: ಯಾವುದೇ ಸರ್ಕಾರಿ ಇಲಾಖೆಯ ಕರ್ತವ್ಯವನ್ನು ಸೇವಾ ಮನೋಭಾವದಿಂದ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಪ್ಪ ಹೇಳಿದರು.
ಸೂಲಿಬೆಲೆಯಲ್ಲಿ ಹಮ್ಮಿಕೊಂಡಿದ್ದ ಬೆಸ್ಕಾಂ ಸಿಬ್ಬಂದಿಗಳ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಆಡಳಿತ ಯಂತ್ರದಲ್ಲಿ ಅಧಿಕಾರ ಮತ್ತು ಹುದ್ದೆಗಳಲ್ಲಿ ಯಾವುದೂ ದೊಡ್ಡದು ಮತ್ತು ಚಿಕ್ಕದು ಎಂಬ ತಾರತಮ್ಯ ಇರುವುದಿಲ್ಲ. ಸಿಕ್ಕಿರುವ ಅವಕಾಶವನ್ನು ನಿಷ್ಠಯಿಂದ ನಿಭಾಯಿಸಬೇಕು. ಸಹಾಯಕ ಕಾರ್ಯಪಾಲ ಅಭಿಯಂತರ ಶ್ರೀಧರಮೂರ್ತಿ, ಮೇಸ್ತ್ರಿಗಳಾದ ಮುನೇಗೌಡ, ಕೃಷ್ಣಮೂರ್ತಿ ಸಲ್ಲಿಸಿರುವ ಸೇವೆ ಅನನ್ಯ ಎಂದರು.ಸಹಾಯಕ ಅಭಿಯಂತರ ಮಹೇಶ್ ಮಾತನಾಡಿ, ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಇಲಾಖೆಯ ಎಲ್ಲಾ ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದೇವೆ. ನಿವೃತ್ತಿ ಹೊಂದಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್ ಬಾಬು, ಬಸವರಾಜು, ಪ್ರಭಾರ ಅಧಿಕಾರಿ ವಿಠ್ಠಲಮೂರ್ತಿ, ನಾರಾಯಣಸ್ವಾಮಿ, ರಾಜೇಂದ್ರಕುಮಾರ್, ಗುತ್ತಿಗೆದಾರರು, ಸಿಬ್ಬಂದಿ ಉಪಸ್ಥಿತರಿದ್ದರು.(ಫೋಟೋ ಕ್ಯಾಪ್ಷನ್)
ಸೂಲಿಬೆಲೆ ಬೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಕೃಷ್ಣಮೂರ್ತಿ, ಮುನೇಗೌಡ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರಮೂರ್ತಿ ಅವರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್ ಬಾಬು, ಬಸವರಾಜು, ಪ್ರಭಾರ ಅಧಿಕಾರಿ ವಿಠ್ಠಲಮೂರ್ತಿ ಇತರರಿದ್ದರು.