ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನವನ್ನು ರಾಜ್ಯಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಈ ನಿಮಿತ್ತ ಸೇವಾ ಕಾರ್ಯಕ್ರಮ ಮತ್ತು ಆಶೀರ್ವಾದ ದೀಪ ಹಚ್ಚುವ ಕಾರ್ಯಕ್ರಮಗಳು ಜರುಗಿದವು.

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನವನ್ನು ರಾಜ್ಯಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಈ ನಿಮಿತ್ತ ಸೇವಾ ಕಾರ್ಯಕ್ರಮ ಮತ್ತು ಆಶೀರ್ವಾದ ದೀಪ ಹಚ್ಚುವ ಕಾರ್ಯಕ್ರಮಗಳು ಜರುಗಿದವು. ಇದರ ಜೊತೆಗೆ ಬಿಜೆಪಿ ಕಾರ್ಯಕರ್ತರಿಂದ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಮೋದಿ ಅವರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅವರು, ಮೋದಿ ಪ್ರಧಾನಿ ಆಗಿರದೆ ಪ್ರಜೆಗಳ ಸೇವಕರಾಗಿದ್ದಾರೆ. ಅಪ್ಪಟ ದೇಶಭಕ್ತ ಮೋದಿ 25 ವರ್ಷಗಳ ಸತತ ಸಾರ್ಥಕ ಜನಸೇವೆ ಯಶಸ್ವಿಗೊಳಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸೆ.17 ರಿಂದ ಅ.17 ರವರೆಗೆ 1 ತಿಂಗಳು ಸೇವಾ ಸಂಕಲ್ಪ ಅಭಿಯಾನ ನಡೆಯಲಿದೆ ಎಂದರು.

ಮೋದಿ ಎಂದರೆ ದೇಶ ಸೇವೆ: ಬಿಎಸ್‌ವೈ

ಪ್ರಧಾನಿ ಮೋದಿ ಎಂದರೆ ದೇಶ ಸೇವೆ, ಸಾಧನೆ ಮತ್ತು ಸಮರ್ಪಣೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೋದಿ ಅವರನ್ನು ಬಣ್ಣಿಸಿದರು. ಬೆಂಗಳೂರಿನ ಮಲ್ಲೇಶ್ವರದ ನಾಡಪ್ರಭು ಕೆಂಪೇಗೌಡ ಮೈದಾನದಲ್ಲಿ ಗುರುವಾರ ವಿಶೇಷ ಪೂಜೆ ಮತ್ತು ಭವ್ಯ ಗಂಗಾರತಿ ನೆರವೇರಿಸಿ ಮಾತನಾಡಿದ ಅವರು, ಇವತ್ತು ನಮ್ಮೆಲ್ಲರ ನೆಚ್ಚಿನ ನಾಯಕ, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಅವರ ಜನ್ಮದಿನ ಎಂದರೆ ನಮ್ಮೆಲ್ಲರಿಗೂ ಸೇವೆಯ ದಿನ ಎಂದರು.

ಯಶವಂತಪುರದ ನಗರ ಪ್ರಾಥಮಿಕ ಆರೋಗ್ಯ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸೇವಾ ಸಂಕಲ್ಪ ಅಭಿಯಾನ ನಡೆಯಿತು. ಬಿಜೆಪಿ ರಕ್ತದಾನ ಶಿಬಿರ, ಬಡವರಿಗೆ ದಿನಸಿ ಕಿಟ್‌ಗಳ ವಿತರಣೆ, ರೋಗಿಗಳಿಗೆ ಹಣ್ಣು-ಹಂಪಲು, ಬಡವರಿಗೆ ಬಟ್ಟೆಗಳು, ಹೊದಿಕೆ ಸೇರಿದಂತೆ ವಿವಿಧ ವಸ್ತುಗಳನ್ನು ವಿತರಿಸಿ ಜನ್ಮದಿನವನ್ನು ಆಚರಿಸಲಾಯಿತು.

ಬೃಹತ್‌ ರಕ್ತದಾನ ಶಿಬಿರ

ಇನ್ನು ಧಾರವಾಡ ಮನಗುಂಡಿಯಲ್ಲಿ ಆಯೋಜಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಕ್ತದಾನ ಮಾಡುವ ಮೂಲಕ ಯುವಕರಿಗೆ ಮಾದರಿಯಾದರು. ಚಿಕಬಳ್ಳಾಪುರದ ಶಿಡ್ಲಘಟ್ಟ ನಗರದ ಕೋಟೆ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ 10,000 ದೀಪಗಳನ್ನು ಬೆಳಗಿಸುವ ಮೂಲಕ ಮೋದಿ ಜನ್ಮದಿನವನ್ನು ಆಚರಿಸಲಾಯಿತು. ಚಾಮರಾಜನಗರದಲ್ಲಿ ಭುಜಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ನಡೆಸಿ ಪ್ರಧಾನಿಗಳಿಗೆ ಶುಭ ಕೋರಲಾಯಿತು. ಚಿತ್ರದುರ್ಗದ ಹಿರಿಯೂರು ತಾಲೂಕಿನಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿ, ಶ್ರಮಿಕ ಕೂಲಿಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ಜನ್ಮದಿನ ಆಚರಿಸಲಾಯಿತು.