ಬೆಂಗಳೂರು : ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿನ ಸರ್ಕಾರಿ ಇಲಾಖೆ, ನಿಗಮ, ಮಂಡಳಿ ಸೇರಿ ಸರ್ಕಾರದ ಇತರ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ 15 ವರ್ಷ ಪೂರ್ಣಗೊಂಡ ವಾಹನಗಳನ್ನು ನಾಶಪಡಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದಾಗಿ ನೋಂದಣಿಯಾಗಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಾಶ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಅದರಂತೆ ರಾಜ್ಯ ಸರ್ಕಾರದ ಅಧೀನದ ಇಲಾಖೆ, ಸಂಸ್ಥೆಗಳಲ್ಲಿನ ವಾಹನಗಳ ನಾಶಕ್ಕೆ ಸರ್ಕಾರ ಮುಂದಾಗಿದೆ.
ಅಲ್ಲದೆ, ಈಗಾಗಲೇ ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ 5 ಸಾವಿರ ವಾಹನಗಳನ್ನು ನಾಶ ಮಾಡುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನೋಂದಣಿಯಾಗಿ 15 ವರ್ಷ ಪೂರ್ಣಗೊಂಡ ವಾಹನಗಳನ್ನು ರಾಜ್ಯದಲ್ಲಿ ಸ್ಥಾಪಿತವಾಗಿರುವ ವಾಹನ ಸ್ಕ್ರಾಪಿಂಗ್ ಘಟಕಗಳಲ್ಲಿ ನಾಶ ಮಾಡುವಂತೆ ಆದೇಶಿಸಲಾಗಿದೆ.