ದೀಪಾವಳಿ ವೇಳೆ ಸಂಭಾವ್ಯ ಅವಘಡ ತಡೆಯಲು ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜು

Published : Oct 18, 2025, 05:43 AM IST
Minto Eye Hospital

ಸಾರಾಂಶ

ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗಬಹುದಾದ ಗಾಯ, ಹಾನಿಗಳಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ಸೇವೆ ನೀಡಲು ಬೆಂಗಳೂರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ.  ಸೇವೆ ನೀಡಲು 25 ಬೆಡ್‌ ವ್ಯವಸ್ಥೆ ಮಾಡಲಾಗಿದೆ.

 ಬೆಂಗಳೂರು :  ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗಬಹುದಾದ ಗಾಯ, ಹಾನಿಗಳಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ಸೇವೆ ನೀಡಲು ಬೆಂಗಳೂರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ.ಶಶಿಧರ್, ದೀಪಾವಳಿ ಪಟಾಕಿ ಸಿಡಿತದಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಮೊದಲು ಗಾಯ ಆಗದಂತೆ ತಡೆಗಟ್ಟಲು ಮನೆಗಳಲ್ಲಿ ಎಚ್ಚರವಹಿಸಬೇಕು. ಇದರ ಹೊರತಾಗಿಯೂ ಗಾಯ ಅಥವಾ ಅನಾಹುತಗಳು ನಡೆದರೆ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಸೇವೆ ನೀಡಲು 25 ಬೆಡ್‌ ವ್ಯವಸ್ಥೆ ಮಾಡಲಾಗಿದೆ. 10 ಮಹಿಳೆಯರ, 10 ಪುರುಷರ ಬೆಡ್‌ ಹಾಗೂ 5 ಮಕ್ಕಳ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಿದ್ದು, ಆಸ್ಪತ್ರೆಗಳ ವೈದ್ಯರಿಗೆ ದೀಪಾವಳಿ ಹಬ್ಬಕ್ಕೆ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯವಿರಲಿದ್ದಾರೆ ಎಂದು ತಿಳಿಸಿದರು.

ಮಿಂಟೋ ಆಸ್ಪತ್ರೆಯಲ್ಲಿ ಪ್ರತಿ ವರ್ಷ ದೀಪಾವಳಿ ವಾರದಲ್ಲಿ ಸರಾಸರಿ 50-60 ಜನರು ಕಣ್ಣಿನ ಗಾಯದಿಂದ ಬರುತ್ತಾರೆ. ರಾಜ್ಯಾದ್ಯಂತ ಉಂಟಾಗುವ ಪಟಾಕಿ ಗಾಯದ ಪ್ರಕರಣಗಳಲ್ಲಿ ಶೇ.40 ಗಾಯಾಳುಗಳು 14 ವರುಷದ ಒಳಗಿನ ಮಕ್ಕಳಾಗಿರುತ್ತಾರೆ. ಅದರಲ್ಲೂ ಗಂಡು ಮಕ್ಕಳ ಪ್ರಮಾಣ ಮೂರು ಪಟ್ಟು ಹೆಚ್ಚಾಗಿರುತ್ತದೆ. ಹೀಗಾಗಿ ಪಟಾಕಿ ಹಚ್ಚುವ ವೇಳೆಯೇ ಎಚ್ಚರ ವಹಿಸಬೇಕು. ಪೋಷಕರು ಈ ಬಗ್ಗೆ ಗಮನ ನೀಡಬೇಕು ಎಂದು ಮನವಿ ಮಾಡಿದರು.

ಪಟಾಕಿ ಹಾನಿಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

- ಮನೆಯಲ್ಲಿ ಒಂದು ಬಕೆಟ್‌ ನೀರು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಇಟ್ಟುಕೊಳ್ಳಬೇಕು.

- ಪಟಾಕಿ ಸಿಡಿಸುವಾಗ ಮುಖವನ್ನು ದೂರವಿಡಬೇಕು.

- ಮನೆಯ ಸದಸ್ಯರು ಮಕ್ಕಳ ಮೇಲೆ ವಿಶೇಷ ಗಮನವಿರಿಸಬೇಕು.

- ಬಯಲು ಪ್ರದೇಶದಲ್ಲಿ ಪಟಾಕಿ ಹಾರಿಸುವುದು ಉತ್ತಮ.

- ಹೊರಗಡೆ ಪಟಾಕಿ ಹಾರಿಸುವಾಗ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು.

- ಪಟಾಕಿಯನ್ನು ಸುಟ್ಟ ನಂತರ ಅವುಗಳನ್ನು ನೀರಿನಲ್ಲಿ ನೆನೆಸಬೇಕು.

- ಚಿಕ್ಕ ಮಕ್ಕಳು ಪಟಾಕಿಯನ್ನು ಮನೆಯ ಪೋಷಕರು ನಿಗಾವಣೆಯಲ್ಲಿ ಮಾತ್ರ ಹಚ್ಚಬೇಕು.

ಹೀಗೆ ಮಾಡಬೇಡಿ

- 5 ವರ್ಷದ ಒಳಗಿನ ಮಕ್ಕಳನ್ನು ಪಟಾಕಿಗಳನ್ನು ಹಚ್ಚಲು ಬಿಡಬೇಡಿ

- ಮನೆಯಲ್ಲಿ ಅಥವಾ ವಾಹನ ನಿಲುಗಡೆಯಲ್ಲಿ ಪಟಾಕಿ ಹಚ್ಚಬಾರದು

- ಸುಟ್ಟ ಪಟಾಕಿಗಳನ್ನು ಮನಬಂದಂತೆ ಬಿಸಾಡಬಾರದು

- ಸುಟ್ಟ ಪಟಾಕಿಗಳನ್ನು ಮತ್ತೆ ಸುಡಲು ಪ್ರಯತ್ನಿಸಬಾರದು

- ಗಾಳಿಯಲ್ಲಿ ಹಾರಾಡುವ ಬಟ್ಟೆಗಳನ್ನು ಧರಿಸಿ ಪಟಾಕಿಗಳನ್ನು ಹಚ್ಚಬಾರದು.

ಆಸ್ಪತ್ರೆ ತುರ್ತು ಸಹಾಯವಾಣಿ:

080-26707176

080-26706221

PREV
Read more Articles on

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ