ಮುಂಗಾರು ಮಳೆಗೆ ರಾಜ್ಯದಲ್ಲಿ ಮತ್ತೆ 4 ಬಲಿ : ರೆಡ್‌ ಅಲರ್ಟ್‌

Published : May 27, 2025, 06:40 AM IST
Monsoon

ಸಾರಾಂಶ

ಕೊಡಗು, ಮಲೆನಾಡಿನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಸೋಮವಾರ ನಾಲ್ವರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.

 ಬೆಂಗಳೂರು : ಕೊಡಗು, ಮಲೆನಾಡಿನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಸೋಮವಾರ ನಾಲ್ವರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮೈಸೂರು ಜಿಲ್ಲೆಗಳ ಅಂಗನವಾಡಿಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕಣವಾಡಿ ಬಳಿ ಕಲ್ಲಪ್ಪ ಧರೆಪ್ಪ ಅಂಬಿ (65) ಎಂಬುವರು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕದ ಮಹಾಲಿಂಗೇಶ್ವರ ನಗರದಲ್ಲಿ ಸೋಮವಾರ ಮುಂಜಾನೆ ಮಳೆಗೆ ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು, ಕೀರ್ತಿಕಾ ಮೃತಪಟ್ಟಿದ್ದಾಳೆ. ನಾಲ್ಕು ವರ್ಷದ ಮತ್ತೊಂದು ಮಗು ಗಾಯಗೊಂಡಿದೆ. ಈ ಮಧ್ಯೆ, ಹೊಲದಿಂದ ಮನೆಗೆ ಮರಳುತ್ತಿದ್ದಾಗ ಗಾಳಿ-ಮಳೆಗೆ ಮುರಿದು ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ ತಾಂಡಾದಲ್ಲಿ ಪೂರಪ್ಪ ಪೋಮಪ್ಪ ಲಮಾಣಿ (66) ಹಾಗೂ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಚ್ಚಗಹಳ್ಳಿಯಲ್ಲಿ ಸಿದ್ದರಾಜು (50) ಎಂಬುವರು ಕೊನೆಯುಸಿರೆಳೆದಿದ್ದಾರೆ. ಧರ್ಮಸ್ಥಳ ಗ್ರಾಮದ ಪೂರ್ಜೆಬೈಲಿನಲ್ಲಿ ಸಿಡಿಲಿಗೆ ಶೀನ ಮಲೆಕುಡಿಯ ಎಂಬುವರು ಗಾಯಗೊಂಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ, ಚಿಕ್ಕಮಗಳೂರಿನಲ್ಲಿ 65, ಮಂಗಳೂರಿನಲ್ಲಿ 35ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 45ಕ್ಕೂಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದ್ದು, ಮೆಸ್ಕಾಂಗೆ 45 ಲಕ್ಷ ರು.ನಷ್ಟ ಸಂಭವಿಸಿದೆ. ಬೆಳಗಾವಿ ಜಿಲ್ಲೆ ಕಣಕುಂಬಿ ಸಮೀಪದ ಕಸಮಳಿ ಗ್ರಾಮದಲ್ಲಿ ಮಲಪ್ರಭಾ ನದಿಯ ನೆರೆಯಿಂದ ಮಣ್ಣಿನ ರಸ್ತೆ ಕೊಚ್ಚಿ ಹೋಗಿದ್ದು, ಬೆಳಗಾವಿ-ಗೋವಾ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೊಂಕರವವಳ್ಳಿ ಬಳಿ ಕಾರಿನ ಮೇಲೆ ಮರ ಬಿದ್ದು, ಕಾರು ಜಖಂಗೊಂಡಿದೆ.

ಒಂದೇ ವಾರದಲ್ಲಿ ನದಿಗಳಿಗೆ ಭರ್ಜರಿ ನೀರು:

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನ ಹೇಮಾವತಿ, ಕಾವೇರಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಹಾರಂಗಿ ಹಾಗೂ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಕುಶಾಲನಗರ ಸಮೀಪದ ರಂಗಸಮುದ್ರ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದೆ. ಕೊಡಗಿನ ಭಾಗಮಂಡಲ, ತ್ರಿವೇಣಿ ಸಂಗಮದ ಸ್ನಾನಘಟ್ಟಗಳು ಮುಳುಗಡೆಯಾಗಿವೆ. ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಒಳಹರಿವು 13 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಸಮೀಪದ ಪಾಲಡ್ಕ ಎರುಗುಂಡಿ ಫಾಲ್ಸ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದ ಯುವಕರು ನೀರಿನ ರಭಸಕ್ಕೆ ಸಿಲುಕಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸಮೀಪ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.

ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ ನದಿಗಿರುವ 3 ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ಹಿಪ್ಪರಗಿ ಜಲಾಶಯದಿಂದ 40 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿ ಪಾತ್ರದ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಊಟಿಗೆ ಪ್ರವಾಸ ಬೇಡ: ಎಚ್ಚರಿಕೆ

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಊಟಿಗೆ ಪ್ರವಾಸ ಕೈಗೊಳ್ಳದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಊಟಿ, ದೊಡ್ಡಬೆಟ್ಟ, ಪೈನ್‌ ಫಾರೆಸ್ಟ್‌, ಲ್ಯಾಬ್ಸ್‌ ರಾಕ್‌ಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಕೊಡಗಿನಲ್ಲಿ ಜೂ.6 ರಿಂದ ಜು.5 ರವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಾಗಮಂಡಲದಲ್ಲಿ 23 ಸೆಂ.ಮೀ. ಮಳೆ:

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 23, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 22 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಪುತ್ತೂರು ಎಚ್‌ಎಂಎಸ್‌ 17, ನಾಪೋಕ್ಲು (ಕೊಡಗು) 16, ಮುಲ್ಕಿ 20, ಸುಳ್ಯ 13, ಧರ್ಮಸ್ಥಳ 13, ಮಂಗಳೂರು 12, ಮಂಗಳೂರು ಎಪಿ ವೀಕ್ಷಣಾಲಯ 12 (ಎಲ್ಲವೂ ದ.ಕ ಜಿಲ್ಲೆ), ಗೇರುಸೊಪ್ಪ 12 (ಉ.ಕ. ಜಿಲ್ಲೆ) ಉಪ್ಪಿನಂಗಡಿ 12, ಆಗುಂಬೆ 12 ಹಾಗೂ ಸೋಮವಾರಪೇಟೆಯಲ್ಲಿ 12 ಸೆಂ.ಮೀ. ಮಳೆಯಾಗಿದೆ.

ರಾಜ್ಯದಲ್ಲಿ ಇನ್ನೂ 6 ದಿನ ಮುಂಗಾರು ಆರ್ಭಟ

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಇನ್ನೂ ಆರು ದಿನ ಮುಂದುವರಿಯಲಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಮಂಗಳವಾರ ರೆಡ್‌ ಅಲರ್ಟ್‌ ಹಾಗೂ ಜೂನ್‌ 1ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಮುಂಗಾರು ಪೂರ್ವ ಮಳೆಯ ಕಾರಣದಿಂದಾಗಿ 10 ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿತ್ತು. ಈಗ ಅವಧಿಗೂ ಮುನ್ನವೇ ಮುಂಗಾರು ಆಗಮನದಿಂದ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿವೆ. ಸೋಮವಾರ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಮಂಗಳವಾರ ಪ್ರಮುಖವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಗಾಳಿಸಹಿತ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಉಳಿದಂತೆ ಹಾಸನ, ಕೊಡಗು, ಬೆಳಗಾವಿ, ಬೀದರ್‌, ಕಲಬುರಗಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಈ ಜಿಲ್ಲೆಗಳಲ್ಲೂ ಮಳೆಯ ಪ್ರಮಾಣ ಹೆಚ್ಚಿರಲಿದೆ.

ರಾಜ್ಯದಲ್ಲಿ ಬುಧವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೂ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್‌, ಕಲಬುರಗಿ, ಕೊಡಗು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಈ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ವರುಣನ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯ ಅಬ್ಬರ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಲಿದೆ. ಶನಿವಾರದಿಂದ ಕರಾವಳಿ ಭಾಗದ ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿರಲಿದೆ. ಹೀಗಾಗಿ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

PREV
Read more Articles on

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ