ರಾಜ್ಯದಲ್ಲಿ ಇನ್ನೂ 6 ದಿನ ಮುಂಗಾರು ಆರ್ಭಟ : 5 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಇನ್ನೂ ಆರು ದಿನ ಮುಂದುವರಿಯಲಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಮಂಗಳವಾರ ರೆಡ್‌ ಅಲರ್ಟ್‌ ಹಾಗೂ ಜೂನ್‌ 1ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Follow Us

 ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಇನ್ನೂ ಆರು ದಿನ ಮುಂದುವರಿಯಲಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಮಂಗಳವಾರ ರೆಡ್‌ ಅಲರ್ಟ್‌ ಹಾಗೂ ಜೂನ್‌ 1ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಮುಂಗಾರು ಪೂರ್ವ ಮಳೆಯ ಕಾರಣದಿಂದಾಗಿ 10 ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿತ್ತು. ಈಗ ಅವಧಿಗೂ ಮುನ್ನವೇ ಮುಂಗಾರು ಆಗಮನದಿಂದ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿವೆ. ಸೋಮವಾರ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಮಂಗಳವಾರ ಪ್ರಮುಖವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಗಾಳಿಸಹಿತ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಉಳಿದಂತೆ ಹಾಸನ, ಕೊಡಗು, ಬೆಳಗಾವಿ, ಬೀದರ್‌, ಕಲಬುರಗಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಈ ಜಿಲ್ಲೆಗಳಲ್ಲೂ ಮಳೆಯ ಪ್ರಮಾಣ ಹೆಚ್ಚಿರಲಿದೆ.

ರಾಜ್ಯದಲ್ಲಿ ಬುಧವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೂ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್‌, ಕಲಬುರಗಿ, ಕೊಡಗು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಈ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ವರುಣನ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯ ಅಬ್ಬರ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಲಿದೆ. ಶನಿವಾರದಿಂದ ಕರಾವಳಿ ಭಾಗದ ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿರಲಿದೆ. ಹೀಗಾಗಿ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Read more Articles on