ಬೆಂಗಳೂರು : ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ದುರ್ಬಲವಾಗಿರಲಿದ್ದು, ಜುಲೈ ಕೊನೆ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಆರಂಭದಲ್ಲಿ ಅಬ್ಬರಿಸಿದ ಮಳೆ ಕ್ರಮೇಣ ದುರ್ಬಲಗೊಳ್ಳುತ್ತಿದ್ದು, ಮುಂದಿನ ಒಂದು ವಾರ ಕಾಲ ಮಳೆ ಕಡಿಮೆ ಆಗಲಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಭಾರೀ ಮೋಡ ಹಾಗೂ ಗಾಳಿ ಕಂಡು ಬಂದರೂ ನಿರೀಕ್ಷೆಯಷ್ಟು ಮಳೆ ಇರುವುದಿಲ್ಲ.
ಮುಂಗಾರು ಮಾರುತಗಳು ಇದೀಗ ಉತ್ತರ ಭಾರತ ಕಡೆ ವಾಲಿವೆ. ಒಡಿಶಾಕ್ಕೆ ಮುಂಗಾರು ಪ್ರವೇಶವಾಗಿರುವಾಗ ದಕ್ಷಿಣ ಭಾರತದಲ್ಲಿ ಮಳೆ ಕಡಿಮೆಯಾಗಿದೆ. ತಮಿಳುನಾಡಿನಲ್ಲಿ ಮುಂಗಾರು ಕೊರತೆ ಆಗಿದೆ. ಇನ್ನೂ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕ ಪ್ರದೇಶದಲ್ಲೂ ಅದೇ ಪರಿಸ್ಥಿತಿ ಉಂಟಾಗಿದೆ. ಒಂದು ವಾರದ ಮಟ್ಟಿಗೆ ಮಳೆ ಕ್ಷೀಣಿಸಲಿದ್ದು, ಆ ಬಳಿಕ ಚುರುಕುಗೊಳ್ಳುವ ಸಾಧ್ಯತೆ ಇದೆ. ಜುಲೈ ಕೊನೇ ವಾರ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಶೇ.21 ರಷ್ಟು ಮಳೆ ಕೊರತೆ:
ಜೂ.26 ರಿಂದ ಜು.2ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 54 ಮಿ.ಮೀ. ನಷ್ಟು ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 42.8 ಮಿ.ಮೀ. ನಷ್ಟು ಮಳೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆಯಾಗಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಲ್ಲಿ ಶೇ.30, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.16 ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ.5ರಷ್ಟು ಮಳೆ ಕೊರತೆಯಾಗಿದೆ.
ಹೆಚ್ಚುತ್ತಿರುವ ಒಟ್ಟಾರೆ ಮಳೆ ಕೊರತೆ:
ಮುಂಗಾರು ಅವಧಿಯಲ್ಲಿ ಒಟ್ಟಾರೆ ರಾಜ್ಯದ ಮಳೆ ಪ್ರಮಾಣ ಗಮನಿಸಿದರೆ ವಾಡಿಕೆಯಷ್ಟು ಆಗಿದೆ. ಆದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.2 ರಷ್ಟು ಒಟ್ಟಾರೆ ಮಳೆ ಕೊರತೆ ಕಂಡು ಬಂದಿದೆ. ಕರಾವಳಿಯಲ್ಲಿ ವಾಡಿಕೆಗಿಂತ ಶೇ.4 ರಷ್ಟು ಮತ್ತು ಉತ್ತರ ಒಳನಾಡಿನಲ್ಲಿ ಶೇ.19 ರಷ್ಟು ಹೆಚ್ಚಿನ ಮಳೆ ಆಗಿದೆ ಎಂದು ಹವಾಮಾನ ಇಲಖೆ ಮಾಹಿತಿ ನೀಡಿದೆ.
15 ಜಿಲ್ಲೆಗಳಲ್ಲಿ ಮಳೆ ಕೊರತೆ
ರಾಜಧಾನಿ ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ತಲಾ ಶೇ.58 ರಷ್ಟು ಮಳೆ ಕೊರತೆ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ.51, ಕೋಲಾರ ಶೇ.42, ಹಾಸನ ಶೇ.41, ಯಾದಗಿರಿ ಶೇ.40, ಚಾಮರಾಜನಗರ ಶೇ.37, ತುಮಕೂರು ಶೇ. 27, ಮಂಡ್ಯ ಶೇ.25, ಕಲಬುರಗಿ ಶೇ.24, ಕೊಪ್ಪಳ ಹಾಗೂ ಮೈಸೂರಿನಲ್ಲಿ ತಲಾ ಶೇ.22, ಶಿವಮೊಗ್ಗ ಶೇ.19, ಬಾಗಲಕೋಟೆ ಶೇ.12, ವಿಜಯಪುರ ಶೇ.5 ರಷ್ಟು ಮಳೆ ಕೊರತೆಯಾಗಿದೆ.