ಮುಡಾ ಕೇಸ್‌ : ಸಿದ್ದುಗಿಂದು ಸಿಬಿಐ ಟೆನ್ಷನ್‌ ! - ತನಿಖೆಯ ಬಗ್ಗೆ ಬೆಳಗ್ಗೆ 10.30ಕ್ಕೆ ತೀರ್ಪು

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೇಳಿಬಂದಿರುವ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ.

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೇಳಿಬಂದಿರುವ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ.

 ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಯನ್ನು 2025ರ ಜ.27ರಂದು ಪೂರ್ಣಗೊಳಿಸಿ ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.

ಈ ಹಿಂದೆಯೇ ಮುಡಾ ಪ್ರಕರಣದ ತನಿಖೆ ನಡೆಯುವುದು ಅತ್ಯಗತ್ಯವಿದೆ ಎಂದು ತೀರ್ಮಾನಿಸಿ ಪೊಲೀಸ್‌ ತನಿಖೆಗೆ ಅನುಮತಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಇದೀಗ ಯಾವ ಆದೇಶ ನೀಡಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಮುಡಾ ನಿವೇಶನ ಹಂಚಿಕೆ ಅಕ್ರಮದ ಪ್ರಕರಣದ ಪ್ರಾಸಿಕ್ಯೂಷನ್‌ ಮತ್ತು ಪೊಲೀಸ್‌ ತನಿಖೆಗೆ ರಾಜ್ಯಪಾಲರು ನೀಡಿದ್ದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ಗೆ 2024ರ ಆ.19ರಂದು ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ 2024ರ ಸೆ.24ರಂದು ಆದೇಶಿಸಿತ್ತು. ಈ ತೀರ್ಪಿನಲ್ಲಿ ಪ್ರಕರಣದ ತನಿಖೆ ನಡೆಯುವುದು ಅತ್ಯಗತ್ಯವಿದೆ ಎಂದು ಹೇಳಿತ್ತು. ಇದೀಗ ಸಿಬಿಐ ತನಿಖೆಗೆ ಆದೇಶಿಸಬೇಕೆಂಬ ಮನವಿ ಕುರಿತ ತೀರ್ಪು ಸಹ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ನೀಡಲಿದೆ.

ಒಂದೊಮ್ಮೆ ಹೈಕೋರ್ಟ್‌ ಅರ್ಜಿ ಪುರಸ್ಕರಿಸಿ ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಕುಟುಂಬದ ಇತರೆ ಸದಸ್ಯರಿಗೆ ಸಿಬಿಐ ತನಿಖೆ ಉರುಳು ಸುತ್ತಿಕೊಳ್ಳಲಿದೆ. ಅಲ್ಲದೆ, ಈಗಾಗಲೇ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಕೈಗೆತ್ತಿಕೊಂಡು ನೋಟಿಸ್‌ ಸಹ ನೀಡಿರುವುದರಿಂದ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಹಾಗೆಯೇ, ಮುಡಾ ಪ್ರಕರಣದಲ್ಲಿ ನಡೆಸುತ್ತಿರುವ ಕಾನೂನು ಹೋರಾಟದಲ್ಲೂ ದೊಡ್ಡ ಹಿನ್ನಡೆ ಉಂಟಾಗಲಿದೆ. ಆದರೆ, ಅರ್ಜಿಯನ್ನು ತಿರಸ್ಕರಿಸಿದರೆ ಮುಖ್ಯಮಂತ್ರಿಗಳಿಗೆ ಸ್ವಲ್ಪಮಟ್ಟಿಗೆ ರಿಲೀಫ್‌ ಸಿಗಬಹುದು.

ಪ್ರಕರಣದ ಹಿನ್ನೆಲೆ: ಮೈಸೂರಿನ ದೇವನೂರು 3ನೇ ಹಂತದ ಬಡಾವಣೆ ಅಭಿವೃದ್ಧಿಗೆ ಮುಡಾ ವಶಪಡಿಸಿಕೊಂಡಿದೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿ ಅವರಿಗೆ ಸೇರಿದ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್‌ 464ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಈ ಸಂಬಂಧ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸೇರಿ ಮೂವರು ಸಾಮಾಜಿಕ ಕಾರ್ಯಕರ್ತರು 2024ರ ಜೂನ್‌-ಜುಲೈನಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಪ್ರಕರಣದ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್‌ ಸೆ.24ರಂದು ತಿರಸ್ಕರಿಸಿತ್ತು. ಈ ಆದೇಶ ಹೊರಬಿದ್ದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಎಫ್‌ಐಆರ್‌ ದಾಖಲಾದ ದಿನವೇ ಅಂದರೆ ಸೆ.27ರಂದು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಜ.27ರಂದು ಪೂರ್ಣಗೊಳಿಸಿದ್ದ ನ್ಯಾ.ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿತ್ತು.

 - ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಜ.27ರಂದು ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ಪೀಠ

- ಮುಡಾ ಕೇಸಲ್ಲಿ ಪೊಲೀಸ್‌ ತನಿಖೆಗೆ ಆದೇಶಿಸಿದ್ದ ನ್ಯಾ। ನಾಗಪ್ರಸನ್ನ ಅವರ ಹೈಕೋರ್ಟ್‌ ಪೀಠದಿಂದ ತೀರ್ಪು ಪ್ರಕಟ

- ಸಿದ್ದರಾಮಯ್ಯ ಪ್ರಕರಣದ ತೀರ್ಪಿನ ಬಗ್ಗೆ ಕುತೂಹಲ. ಅರ್ಜಿ ವಜಾಗೊಂಡರೆ ಸಿದ್ದು ಮತ್ತು ಕುಟುಂಬ ನಿರಾಳ

- ಇಲ್ಲದಿದ್ದರೆ ಕಾನೂನು ಹೋರಾಟದಲ್ಲಿ ಭಾರಿ ಹಿನ್ನಡೆ. ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಬೇಕಾದ ಆತಂಕ

Share this article