ಮುಡಾ : ಸಿಎಂ ಭಾಮೈದಗೆ ಇ.ಡಿ.5 ತಾಸು ಗ್ರಿಲ್‌ - ಜಮೀನು ಖರೀದಿಸಿ ಅಕ್ಕನಿಗೆ ನೀಡಿದ್ದರ ಬಗ್ಗೆ ಪ್ರಶ್ನೆ

Published : Nov 19, 2024, 09:18 AM IST
Muda

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದನನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದನನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.

ಸೋಮವಾರ ಇ.ಡಿ. ಕಚೇರಿಗೆ ಹಾಜರಾದ ಮಲ್ಲಿಕಾರ್ಜುನಸ್ವಾಮಿ ಅವರು ಐದು ತಾಸುಗಳಿಗಿಂತ ಹೆಚ್ಚು ಸಮಯ ವಿಚಾರಣೆ ಎದುರಿಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇಳಿಬಂದ ಹೆಸರುಗಳ ವ್ಯಕ್ತಿಗಳ ವಿಚಾರಣೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಪ್ರಕರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮೂರನೇ ಆರೋಪಿಯಾಗಿದ್ದಾರೆ. ಮುಂದಿನ ಬಾರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೂ ನೋಟಿಸ್‌ ಜಾರಿ ಮಾಡಿ ವಿಚಾರಣೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರು ಎರಡನೇ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಹ ವಿಚಾರಣೆಗೆ ಕರೆದು ಮಾಹಿತಿ ಸಂಗ್ರಹಿಸುವ ನಿರೀಕ್ಷೆ ಇದೆ. ಪಾರ್ವತಿ ಅವರ ವಿಚಾರಣೆ ಬಳಿಕ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಮುಡಾ ಹಗರಣ ಸಂಬಂಧ ಮಲ್ಲಿಕಾರ್ಜುನಸ್ವಾಮಿ ಅವರ ಪಾತ್ರದ ಕುರಿತು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಅವರು ನಿವೇಶನ ಖರೀದಿಸಿ ತಮ್ಮ ಸಹೋದರಿಗೆ ನೀಡಿರುವ ಆರೋಪ ಇರುವ ಹಿನ್ನೆಲೆಯಲ್ಲಿ ವಿಚಾರಣೆ ಕೈಗೊಳ್ಳಲಾಗಿದೆ. ವಿಚಾರಣೆ ವೇಳೆ ಮಲ್ಲಿಕಾರ್ಜುನಸ್ವಾಮಿ ಅವರು ಭೂಮಿ ಖರೀದಿಸಿರುವ ಬಗ್ಗೆ ಹೇಳಿಕೆ ನೀಡಿದ್ದರಲ್ಲದೇ, ತಮ್ಮ ಬಳಿಯ ದಾಖಲೆಗಳನ್ನು ಒದಗಿಸಿದ್ದಾರೆ. ಕಾನೂನು ಬದ್ಧವಾಗಿಯೇ ನಿವೇಶನ ಖರೀದಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇ.ಡಿ. ಅಧಿಕಾರಿಗಳಿಗೆ ದೂರು ನೀಡಿದ್ದು, ಹಗರಣದಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿದೆ. ನಿವೇಶನ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಿಕ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇ.ಡಿ. ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ತಪಾಸಣೆ ಕೈಗೊಂಡಿದ್ದರು. ಅಲ್ಲದೇ, ಹಗರಣದಲ್ಲಿ ಹೆಸರು ಕೇಳಿಬಂದವರನ್ನು ವಿಚಾರಣೆ ಸಹ ನಡೆಸಿದ್ದರು. ಈ ವೇಳೆ ವಿಸ್ತೃತವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ, ಪ್ರತಿ ತನಿಖೆಯಲ್ಲಿಯೂ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

PREV

Recommended Stories

ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ
‘ಕನ್ನಡ ಸಂಘ ಬಹರೈನ್‌’ಗೆ ಸರ್ಕಾರದಿಂದ ₹1 ಕೋಟಿ