ಮಯೂರ್ ಹೆಗಡೆ
ಬೆಂಗಳೂರು : ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದೊಳಗೆ ದಾರಿ ಹುಡುಕಲು ನೆರವಾಗುವ ‘ನಮ್ಮ ನಕ್ಷೆ’ ಪೋರ್ಟಲ್ ರೂಪಿಸುತ್ತಿರುವ ನೈಋತ್ಯ ರೈಲ್ವೆಯು ರಾಜ್ಯದ ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳ ಡಿಜಿಟಲ್ ನ್ಯಾವಿಗೇಷನ್ ಕಾರ್ಯವನ್ನು ಕೈಗೊಂಡಿದೆ.
ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ಎಲ್ಲೆಲ್ಲಿ ಏನೇನಿದೆ? ಹೇಗೆ ಹೋಗಬೇಕು ಎಂಬುದನ್ನು ಈ ನಕ್ಷೆ (nammanakshe.com) ತಿಳಿಸಿಕೊಡಲಿದೆ. ಪ್ರವೇಶದ್ವಾರ ಸೇರಿ ನಿಲ್ದಾಣದ ವಿವಿಧೆಡೆ ಇಡಲಾಗುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ಈ ನಕ್ಷೆ ಸಿಗಲಿದೆ. ಪ್ಲಾಟ್‌ಫಾರ್ಮ್, ಪ್ರವೇಶದ್ವಾರ, ಲಿಫ್ಟ್ ಸೇರಿದಂತೆ ಶೌಚಾಲಯ, ಹೋಟೆಲ್, ಸರಕು ಸಾಗಣೆ ವ್ಯವಸ್ಥೆ ಸೇರಿ ಸಮಗ್ರ ಮಾಹಿತಿ ಇದರಿಂದ ಲಭ್ಯವಾಗಲಿದೆ.
10 ಪ್ಲಾಟ್‌ಫಾರಂಗಳಿರುವ, ರಾಜ್ಯದ ಅತೀ ಜನದಟ್ಟಣೆಯ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಪ್ರತಿದಿನ 1.75 ಲಕ್ಷದಿಂದ 2 ಲಕ್ಷ ಪ್ರಯಾಣಿಕರು (ವಾರ್ಷಿಕ 2.50 ಕೋಟಿ) ಭೇಟಿ ಕೊಡುತ್ತಾರೆ. ಹುಬ್ಬಳ್ಳಿ ವಿಶ್ವದ ಅತೀ ಉದ್ದದ ಪ್ಲಾಟ್‌ಫಾರ್ಮ್ ಸೇರಿ 8 ಪ್ಲಾಟ್‌ಫಾರ್ಮ್ ಹೊಂದಿದ್ದು ದಿನಕ್ಕೆ ಸುಮಾರು 40 ಸಾವಿರ ಜನ ಬಂದು ಹೋಗುತ್ತಾರೆ. ಮೈಸೂರು ವಾರ್ಷಿಕ 97.33 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತದೆ.
ಹೀಗಿರುವಾಗ ಹೊಸದಾಗಿ ಬಂದವರೂ ಸೇರಿ ದೈನಂದಿನ ಪ್ರಯಾಣಿಕರಿಗೂ ರೈಲ್ವೆ ನಿಲ್ದಾಣಗಳು ಗೊಂದಲ ಉಂಟುಮಾಡುತ್ತವೆ. ಪ್ರಯಾಣಿಕರು ಸದ್ಯ ತಾವು ನಿಲ್ದಾಣದಲ್ಲಿ ಎಲ್ಲಿದ್ದೇವೆ ಎಂಬುದನ್ನು ನಮೂದಿಸಿ, ಅಲ್ಲಿಂದ ಎಲ್ಲಿಗೆ ಹೋಗಬೇಕೆಂಬ ದಾರಿಯನ್ನು ‘ನಮ್ಮ ನಕ್ಷೆ’ಯ ಮೂಲಕ ಕಂಡುಕೊಳ್ಳಲು ಸಾಧ್ಯವಿದೆ. ಜತೆಗೆ ಸಹಪ್ರಯಾಣಿಕರ ನಡುವೆ ಸೇತುವೆಯಾಗಿಯೂ ‘ನಮ್ಮ ನಕ್ಷೆ’ ನೆರವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.
ಪ್ರಸ್ತುತ ಬೆಂಗಳೂರು, ಮೈಸೂರು, ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳ ನಕ್ಷೆ ರೂಪಿಸಲಾಗಿದ್ದು, ಇವಿನ್ನೂ ಪ್ರಾಥಮಿಕ ಹಂತದಲ್ಲಿವೆ. ಇವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಹಾಗೂ ಶೀಘ್ರವೇ ಉಳಿದ ಪ್ರಮುಖ ನಿಲ್ದಾಣಗಳ ‘ನಮ್ಮ ನಕ್ಷೆ’ಯನ್ನು ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಸದ್ಯ ಕೆಎಸ್ಆರ್ ಬೆಂಗಳೂರು ನಿಲ್ದಾಣದ ಮಾಹಿತಿಯನ್ನು ಈ ಅಪ್ಲಿಕೇಷನ್‌ನಲ್ಲಿ ಅಳವಡಿಸಲಾಗುತ್ತಿದೆ. ಶೀಘ್ರದಲ್ಲೇ ಎಸ್ಎಂವಿಟಿ, ಕೆಂಗೇರಿ, ಯಲಹಂಕ ಮತ್ತು ಹೊಸೂರು ರೈಲ್ವೆ ನಿಲ್ದಾಣಗಳನ್ನು ಸೇರಿಸಲಾಗುತ್ತದೆ. ಕೆಎಸ್ಆರ್ ಬೆಂಗಳೂರು ನಿಲ್ದಾಣದ ಮುಖ್ಯ ಮತ್ತು ದ್ವಿತೀಯ ಪ್ರವೇಶದ್ವಾರಗಳಲ್ಲಿ ಬ್ಯಾಕ್‌ಲಿಟ್ (ಹಿಂಬದಿ ಬೆಳಕು) ನಕ್ಷೆಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ತಿಳಿಸಿದರು.
ಮಹಿಳೆಯರಿಗೆ ಅಗತ್ಯವಾದ ಹಾಲುಣಿಸುವ ಕೇಂದ್ರ, ನಿರೀಕ್ಷಣಾ ಕೋಣೆಯ ಮಾಹಿತಿಯನ್ನು ನಮ್ಮ ನಕ್ಷೆ ಒಳಗೊಂಡಿರಲಿದೆ. ಕುಡಿವ ನೀರು, ಪ್ರಯಾಣಿಕರು ನಿಲ್ದಾಣಗಳಲ್ಲಿನ ಮ್ಯೂಸಿಯಂಗೆ ಭೇಟಿ ನೀಡಲು ಇದರಿಂದ ಅನುಕೂಲ ಆಗಲಿದೆ. ಹೊಸದಾಗಿ ಬಂದಿರುವ ಪ್ರಯಾಣಿಕ ವಿಳಂಬ ತಪ್ಪಿಸಿಕೊಳ್ಳಲು, ತಾನು ಪ್ರಯಾಣಿಸಬೇಕಾದ ರೈಲಿರುವ ಪ್ಲಾಟ್‌ಫಾರ್ಮ್‌ಗೆ ತ್ವರಿತವಾಗಿ ತೆರಳಲು ಇದರಿಂದ ಸಹಾಯವಾಗಲಿದೆ. ಭಾಷಾ ಸಮಸ್ಯೆ, ಇನ್ನೊಬ್ಬರನ್ನು ಕೇಳಿಕೊಂಡು ಹೋಗಬೇಕಾದ ಅವಲಂಬನೆಯನ್ನು ‘ನಮ್ಮ ನಕ್ಷೆ’ ನಿವಾರಿಸಲಿದೆ ಎಂದು ನೈಋತ್ಯ ರೈಲ್ವೆ ಸಿಪಿಆರ್‌ಒ ಡಾ. ಮಂಜುನಾಥ ಕನಮಡಿ ಹೇಳಿದರು.
‘ನಮ್ಮ ನಕ್ಷೆʼ ಮೂಲಕ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗದ ಪ್ರಮುಖ ನಿಲ್ದಾಣಗಳ ನಕ್ಷೆಯನ್ನು ರೂಪಿಸಲಾಗಿದೆ. ಪ್ರಯಾಣಿಕರಿಗೆ ಗೊಂದಲ ಆಗದಿರಲು, ನಿಲ್ದಾಣದ ನಿಖರ ಮಾಹಿತಿಯನ್ನು ಇದು ಒದಗಿಸಲಿದೆ.
- ಡಾ. ಮಂಜುನಾಥ ಕನಮಡಿ, ಸಿಪಿಆರ್‌ಒ, ನೈಋತ್ಯ ರೈಲ್ವೆ