ನೀಟ್‌ ಪರೀಕ್ಷೆ: 1.49 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ

ಸಾರಾಂಶ

2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶಕ್ಕೆ ಮೇ 4ರಂದು ದೇಶಾದ್ಯಂತ ನೀಟ್‌ (ಯುಜಿ) ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲೂ 381 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಬೆಂಗಳೂರು : 2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶಕ್ಕೆ ಮೇ 4ರಂದು ದೇಶಾದ್ಯಂತ ನೀಟ್‌ (ಯುಜಿ) ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲೂ 381 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪರೀಕ್ಷೆ ನಡೆಯಲಿದೆ. ತಪಾಸಣೆ ಹಾಗೂ ನೋಂದಣಿ ದೃಷ್ಟಿಯಿಂದ ಮಧ್ಯಾಹ್ನ 1.30ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜೊತೆಗೆ ಕಾಲೇಜಿನ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌/ಪ್ಯಾನ್‌ ಕಾರ್ಡ್‌ ಸೇರಿ ಯಾವುದಾದರೊಂದು ಮಾನ್ಯತೆ ಇರುವ ಗುರುತಿನ ಚೀಟಿ ಮತ್ತು ಎರಡು ಪಾಸ್‌ಪೋರ್ಟ್‌ ಅಳತೆಯ ಫೋಟೋಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹಾಜರಾಗುವಂತೆ ನ್ಯಾಷನಲ್ ಟೆಸ್ಟಿಂಗ್‌ ಏಜೆನ್ಸಿ(ಎನ್‌ಟಿಎ) ಸೂಚಿಸಿದೆ.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ. ವಸ್ತ್ರಸಂಹಿತೆ ಅನುಸಾರ ಪೂರ್ಣ ತೋಳಿರುವ ಮೇಲಂಗಿ, ದೊಡ್ಡ ಬಟನ್ ಗಳಿರುವ ಶರ್ಟ್‌/ಪ್ಯಾಂಟ್‌/ಶೂ/ ಸಾಕ್ಸ್ / ಎತ್ತರದ ಚಪ್ಪಲಿಗಳು/ ಕಿವಿಯೋಲೆ/ಬಳೆ/ಸರ/ಕಾಲ್ಗೆಜ್ಜೆ/ಮೂಗುತಿ/ಜಡೆ ಕ್ಲಿಪ್ ಹಾಗೂ ಇತರ ಯಾವುದೇ ಮೆಟಲ್ ಉಪಕರಣಗಳನ್ನು ಧರಿಸುವಂತಿಲ್ಲ ಹಾಗೂ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ.

ಎನ್‌ಟಿಎಯಿಂದ ಶೋಧನಾ ಉಪಕರಣ ಮತ್ತು ಜಾಮರ್‌ ಅಳವಡಿಸಲು ಏಜೆನ್ಸಿಯವರನ್ನು ನಿಯೋಜಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನಿಯೋಜಿತ ಅಧಿಕಾರಿ/ಸಿಬ್ಬಂದಿ ಹೊರತುಪಡಿಸಿ, ಇತರೆ ಯಾವುದೇ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.ರಾಜ್ಯದಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Share this article