ಹೊಸ ಶಾಲೆಗೆ ಸ್ವಂತ ಭೂಮಿ/ 15 ವರ್ಷ ಭೂ ಗುತ್ತಿಗೆ ಕಡ್ಡಾಯ

Published : Mar 28, 2026, 08:31 AM IST
School

ಸಾರಾಂಶ

ಹೊಸ ಶಾಲೆ ಆರಂಭ, ಮಾನ್ಯತೆ ಹಾಗೂ ಶಾಲೆಗಳ ಸ್ಥಳಾಂತರ ವಿಚಾರಗಳಿಗೆ ಸಂಬಂಧಿಸಿ ಶಾಲಾ ಶಿಕ್ಷಣ ಇಲಾಖೆಯು ಹೊಸದಾಗಿ ಪ್ರತ್ಯೇಕ ಕರಡು ನಿಯಮಾಗಳಿಗಳನ್ನು ರೂಪಿಸಿ ಶುಕ್ರವಾರ ಪ್ರಕಟಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರಿಗೆ 15 ದಿನಗಳಲ್ಲಿ ಕಳುಹಿಸುವಂತೆ ಇಲಾಖೆ ಕೋರಿದೆ.

  ಬೆಂಗಳೂರು :  ಹೊಸ ಶಾಲೆ ಆರಂಭ, ಮಾನ್ಯತೆ ಹಾಗೂ ಶಾಲೆಗಳ ಸ್ಥಳಾಂತರ ವಿಚಾರಗಳಿಗೆ ಸಂಬಂಧಿಸಿ ಶಾಲಾ ಶಿಕ್ಷಣ ಇಲಾಖೆಯು ಹೊಸದಾಗಿ ಪ್ರತ್ಯೇಕ ಕರಡು ನಿಯಮಾಗಳಿಗಳನ್ನು ರೂಪಿಸಿ ಶುಕ್ರವಾರ ಪ್ರಕಟಿಸಿದೆ.

ಇವುಗಳಿಗೆ ಆಕ್ಷೇಪಣೆಗಳನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಂ.ಎಸ್. ಕಟ್ಟಡ, ಬೆಂಗಳೂರು, ಇವರಿಗೆ 15 ದಿನಗಳಲ್ಲಿ ಕಳುಹಿಸುವಂತೆ ಇಲಾಖೆ ಕೋರಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮ

ಮೊದಲನೆಯದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ) (ತಿದ್ದುಪಡಿ) ನಿಯಮಗಳು 2026’, ಕರಡು ನಿಯಮಾವಳಿಯಲ್ಲಿ, ರಾಜ್ಯದಲ್ಲಿ ಹೊಸದಾಗಿ ಪೂರ್ವ ಪ್ರಾಥಮಿಕದಿಂದ ಪ್ರೌಢ ಶಾಲೆಗಳನ್ನು ಸ್ಥಾಪಿಸಲು ಬಯಸುವ ಖಾಸಗಿ ಸಂಸ್ಥೆಗಳು ಅಗತ್ಯ ಸ್ವಂತ ಭೂಮಿ ಅಥವಾ ಕನಿಷ್ಠ 15 ವರ್ಷಗಳಿಗೆ ನೋಂದಾಯಿತ ಗುತ್ತಿಗೆ ಭೂಮಿ ಹೊಂದಿರಬೇಕು. ಭೂ ಮಾಲೀಕತ್ವದ ಪುರಾವೆಯಾಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ (ಪಹಣಿ), ಇ-ಖಾತಾ ಅಥವಾ ಖಾತಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ಭೂಮಿಯು ಶಾಲಾ ಕಟ್ಟಡ ಮತ್ತು ಆಟದ ಮೈದಾನಕ್ಕೆ ಪೂರಕವಾಗಿರಬೇಕು ಎಂದು ತಿಳಸಿಲಾಗಿದೆ.

ಅದೇ ರೀತಿ, ಶಾಲೆ, ಆಡಳಿತ ಮಂಡಳಿ ಸ್ಥಳಾಂತರಕ್ಕೆ ಸಂಬಂಧಿಸಿದ ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಬದಲಾವಣೆ ಅಥವಾ ಸ್ಥಳ ಬದಲಾವಣೆ) (ತಿದ್ದುಪಡಿ) ನಿಯಮಗಳು, 2026’ ರ ಕರಡು ನಿಯಮಾವಳಿಯಲ್ಲಿ, ಹಾಲಿ ಶಾಲೆಗಳ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ ಸುಸ್ಥಿತಿಯಲ್ಲಿರುವ ಸ್ವಂತ, ಬಾಡಿಗೆ ಅಥವಾ ಲೀಸ್‌ ಜಾಗ, ಕಟ್ಟಡಕ್ಕೆ ಸ್ಥಳಾಂತರಿಸಲು ಒಂದು ಬಾರಿ ಮಾತ್ರ ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಮಾನ್ಯತೆಗೆ ಠೇವಣಿ ಕಡ್ಡಾಯ:

‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು, 1999’ ಕ್ಕೆ ತಿದ್ದುಪಡಿ ತರಲು ಶಿಕ್ಷಣ ಇಲಾಖೆ ನಿರ್ಧರಿಸಿ ಕರಡು ಅಧಿಸೂಚನೆಯಲ್ಲಿ, ಶಾಲೆಗಳು ಮಾನ್ಯತೆಗಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೊಂದಿಗೆ ಇನ್ನು ಮುಂದೆ ಕಡ್ಡಾಯವಾಗಿ ಇ-ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಭದ್ರತಾ ಠೇವಣಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಈ ಠೇವಣಿಯನ್ನು ಆಯಾ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹೆಸರಿನಲ್ಲಿ ಇಡಬೇಕು. ಠೇವಣಿಯ ಮೇಲೆ ಬರುವ ಬಡ್ಡಿಯನ್ನು ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಒಂದು ವೇಳೆ ಶಾಲೆ ಮುಚ್ಚಲ್ಪಟ್ಟರೆ ಅಥವಾ ಆಡಳಿತ ಮಂಡಳಿಯು ಕರ್ತವ್ಯ ಲೋಪ ಎಸಗಿದರೆ, ಸಿಬ್ಬಂದಿಗೆ ನೀಡಬೇಕಾದ ಬಾಕಿ ವೇತನ ಅಥವಾ ಇತರ ಪಾವತಿಗಳನ್ನು ಈ ಭದ್ರತಾ ಠೇವಣಿಯಿಂದ ಭರಿಸಲು ಇಲಾಖೆಗೆ ಸಂಪೂರ್ಣ ಹಕ್ಕಿರುತ್ತದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಲ್ಯಾಂಬೋರ್ಗಿನಿ ಗಿರಿಗಿಟ್ಲೆ:ಮುತ್ತಪ್ಪರೈ ಪುತ್ರನ ವಿರುದ್ಧ ಮತ್ತೊಂದು ಕೇಸ್
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಪತ್ತೆ!