ಈ ಬಾರಿ ರಾಜ್ಯದ ಒಂಬತ್ತು ಮಂದಿಗೆ ಪದ್ಮ ಗೌರವಗಳು ಒಲಿದಿದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಮುಖರಿಗೆ ಪ್ರಶಸ್ತಿಯ ಗೌರವ ಒಲಿದು ಬಂದಿದೆ
ನವದೆಹಲಿ : ಈ ಬಾರಿ ರಾಜ್ಯದ ಒಂಬತ್ತು ಮಂದಿಗೆ ಪದ್ಮ ಗೌರವಗಳು ಒಲಿದಿದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಮುಖರಿಗೆ ಪ್ರಶಸ್ತಿಯ ಗೌರವ ಒಲಿದು ಬಂದಿದೆ
ಪದ್ಮವಿಭೂಷಣ ವಿಜೇತರು
ನಟ ಅನಂತ್‌ನಾಗ್: ಕನ್ನಡದ ಮೇರು ನಟ, ಶಂಕರ್‌ನಾಗ್‌ನ ಹಿರಿಯ ಸಹೋದರರಾದ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರ 2025ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿದೆ. 1948 ಸೆ.4ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಜನಿಸಿದರು. ನಟ ಇವರು ಮುಂಬೈನಲ್ಲಿ ಕನ್ನಡ ಮತ್ತು ಕೊಂಕಣಿ ನಾಟಕಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು1973ರಲ್ಲಿ ಸಂಕಲ್ಪ ಎಂಬ ಕನ್ನಡ ಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. 1987 ರಂದು ಗಾಯಿತ್ರಿ ಎಂಬುವರನ್ನು ವಿವಾಹವಾದರು. ಇವರು ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಕನ್ನಡದ ಅನೇಕ ಹಿರಿಯ ಹಾಗೂ ಕಿರಿಯ ಕಲಾವಿದ ರರೊಂದಿಗೆ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡವಲ್ಲದೇ ಹಿಂದಿ, ತೆಲಗು, ಮರಾಠಿ ಮಲಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸರ್ಕಾರದ ಅವಧಿಯಲ್ಲ ಎಂಎಲ್‌ಸಿ, ಎಂಎಲ್‌ಎ ಮತ್ತು ಮಂತ್ರಿಯಾಗಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಪಿಟೀಲು ವಾದಕ ಎಲ್. ಸುಬ್ರಹ್ಮಣಿಯಂ:
ಖ್ಯಾತ ವಯೋಲಿನ್ ವಾದಕ ಡಾ.ಲಕ್ಷ್ಮೀನಾರಾಯಣ ಸುಬ್ರಹ್ಮಣಿಯಂ(77) ಅವರಿಗೆ ಭಾರತ ಸರ್ಕಾರ 2025ನೇ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿಯನ್ನು ಘೋಷಿಸಿದೆ. 1947ರ ಜು.23ರಂದು ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿ ಜನಿಸಿದ ಎಲ್. ಸುಬ್ರಹ್ಮಣಿಯಂ ಅವರು ತಮ್ಮ ಸಮ್ಮಿಳನ ಸಂಗೀತ ಹಾಗೂ ವಿಶೇಷ ವಾದನ ಕಲೆಯಿಂದ ದೇಶ ವಿದೇಶಗಳಲ್ಲಿ ಗುರುತಿಸಿಕೊಂಡಿದ್ದಾರೆ. ಚಿಕ್ಕಂದಿನಲ್ಲೇ ತಮ್ಮ ತಂದೆಯಿಂದ ಸಂಗೀತ ಶಿಕ್ಷಣ ಪಡೆದು 6ನೇ ವರ್ಷಕ್ಕೆ ವಯೋಲಿನ್ ಹಿಡಿದ ಇವರು, ಸತತ 65 ವರ್ಷಗಳಿಂದ ತಮ್ಮ ಕೈಚಳಕದ ಮೂಲಕ ಕೇಳುಗರ ಕಿವಿಗೆ ಸಂಗೀತದೌತಣ ಬಡಿಸುತ್ತಿದ್ದಾರೆ. ಸುಬ್ರಹ್ಮಣಿಯಂ ಅವರು ಬಹುವಾದ್ಯ ಪರಿಣತರು. ಆರ್ಕೇಸ್ಟ್ರಾ, ಬ್ಯಾಲೆಟ್ ಹಾಗೂ ಹಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಇವರು, ‘ಯುಫೋನಿ’ ಎಂಬ ಸಂಗೀತ ಕುರಿತಾದ ಪುಸ್ತಕವನ್ನೂ ರಚಿಸಿದ್ದಾರೆ. ಇವರಿಗೆ ಭಾರತ ಸರ್ಕಾರ 1989ರಲ್ಲಿ ಪದ್ಮ ಶ್ರೀ, 2001ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿದೆ.
ಕರ್ನಾಟಕದ ಪದ್ಮಶ್ರೀ ವಿಜೇತರು ವೆಂಕಪ್ಪ ಅಂಬಾಜಿ ಸುಗತೇಕರ್:
ಕರ್ನಾಟಕದ ಬಾಗಲಕೋಟೆಯ ಗೊಂದಲಿ (ಜನಪದ ಹಾಡುಗಳು) ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ (81) ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ‘ಗೊಂದಲಿ ಭೀಷ್ಮ’ ಎಂದೇ ಖ್ಯಾತರಾಗಿರುವ ವೆಂಕಪ್ಪ ಅವರು ಘುಮಂಟು ಎಂಬ ಹಿಂದುಳಿದ ಸಮಾಜದವರು. ಇದುವರೆಗೆ 1,000ಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಹಾಡಿದ್ದು, 150ಕ್ಕೂ ಹೆಚ್ಚು ಗೊಂದಲಿ ಕಥೆಗಳನ್ನು ಹೇಳುವ ಮೂಲಕ ಜನಪದ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಗೊಂದಲಿ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ₹1 ಸಂಭಾವನೆಯನ್ನೂ ಪಡೆಯದೆ, ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಫೆ.25ರಂದು ತಮ್ಮ 110ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಇವರ ಬಗ್ಗೆ ಗುಣಗಾನ ಮಾಡಿದ್ದರು.
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ:
ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಭೀಮವ್ವ ಅನಕ್ಷರಸ್ಥೆಯಾಗಿದ್ದರೂ ತಮ್ಮ 14ನೇ ವಯಸ್ಸಿಗೆ ತೊಗಲು ಬೊಂಬೆಯಾಟದಲ್ಲಿ ಪರಿಣತಿ ಪಡೆದಿದ್ದರು. ಕಳೆದ 70 ವರ್ಷಗಳಿಂದ ತೊಗಲು ಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಬಂದಿರುವ ಇವರು ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್ ಮತ್ತು ಹಾಲೆಂಡ್ ಸೇರಿ 12ಕ್ಕೂ ಅಧಿಕ ದೇಶಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ನಾಡಿನ ಜಾನಪದ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. 1993ರಲ್ಲಿ ಇರಾನ್ ಇವರಿಗೆ ಬೊಂಬೆಯಾಟ ಪ್ರಶಸ್ತಿ ನೀಡಿ ಗೌರವಿಸಿತ್ತು.
ವಿಜಯಲಕ್ಷ್ಮೀ ದೇಶಮಾನೆ:
ಕಲಬುರಗಿ ಮೂಲದ ಖ್ಯಾತ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಅವರಿಗೆ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಕಳೆದ 40 ವರ್ಷಗಳಿಂದ ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ಜೀವದಾನ ಮಾಡಿದ್ದಾರೆ. ಹಿಂದುಳಿದ ಮಾದಿಗ ಸಮುದಾಯದಿಂದ ಬಂದಿರುವ ಇವರು ಬಾಲ್ಯದಲ್ಲಿ ಅಪಾರ ಬಡತನವನ್ನು ಕಂಡವರು. ತಂದೆ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ತಾಯಿಗೆ ತರಕಾರಿ ಮಾರಲು ಸಹಾಯ ಮಾಡಿ ಛಲ ಬಿಡದೆ ಓದಿ ವೈದ್ಯೆಯಾಗಿ, ತಮ್ಮ ಇಡೀ ಬದುಕನ್ನು ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಮುಡಿಪಾಗಿಟ್ಟಿದ್ದಾರೆ. ಬೆಂಗಳೂರಿನ ಕಿದ್ವಾಯಿ ಮೆಮೊರಿಯಲ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಸಮುದಾಯ ಜಾಗೃತಿ ಮೂಡಿಸುವಲ್ಲಿ ಅನುಪಮ ಕೊಡುಗೆ ನೀಡಿದ್ದಾರೆ. ಸ್ತನ ಕ್ಯಾನ್ಸರ್ ಸಂಶೋಧನೆಯಲ್ಲಿ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸುವ ಮೂಲಕ ಆಂಕೊಲಾಜಿ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ರಿಕ್ಕಿ ಕೇಜ್:
ಭಾರತೀಯ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರಿಗೆ ಭಾರತ ಸರ್ಕಾರ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. 1981ರಲ್ಲಿ ಉತ್ತರ ಕೆರೊಲಿನಾದಲ್ಲಿ ಜನಿಸಿದ ರಿಕ್ಕಿ ತಮ್ಮ 8ನೇ ವಯಸ್ಸಿಗೆ ಬೆಂಗಳೂರಿನ ಆಗಮಿಸಿದರು. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಅಧ್ಯಯನ ಮಾಡಿ, ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ದಂತವೈದ್ಯಶಾಸ್ತ್ರದಲ್ಲಿ ಪದವಿ ಪಡೆದರು. ರಿಕ್ಕಿ ಕೇಜ್ 35 ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 16 ಅಂತಾರಾಷ್ಟ್ರೀಯ ಸ್ಟುಡಿಯೋ ಆಲ್ಬಮ್‌ಗಳು, 3,500ಕ್ಕೂ ಹೆಚ್ಚು ಜಾಹೀರಾತುಗಳು ಮತ್ತು ವೈಲ್ಡ್ ಕರ್ನಾಟಕ ಸೇರಿ ನಾಲ್ಕು ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಹಿರಿಮೆ ರಿಕ್ಕಿ ಅವರಿಗಿದೆ. ಸಂಗೀತ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವ ಗ್ರ್ಯಾಮಿ ಪ್ರಶಸ್ತಿಯನ್ನು 3 ಬಾರಿ ಪಡೆದ ಮೊದಲ ಭಾರತೀಯ ಹಾಗೂ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ರಿಕ್ಕಿ ಪಾತ್ರರಾಗಿದ್ದಾರೆ.
ಹಾಸನದ ಹುಡುಗನಿಗೆ ಪದ್ಮವಿಭೂಷಣ ಗೌರವ
ಭಾರತದ ಸಾರ್ವಜನಿಕ ಸೇವಾ ಪ್ರಸಾರಕ ಪ್ರಸಾರ್ ಭಾರತಿಯ ಮುಖ್ಯಸ್ಥರಾದ ಡಾ। ಅರಕಲಗೂಡು ಸೂರ್ಯಪ್ರಕಾಶ್ ಅವರಿಗೆ ಭಾರತ ಸರ್ಕಾರ 2025ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಟಿವಿ ಮತ್ತು ಮುದ್ರಣ ಮಾಧ್ಯಮದಲ್ಲಿ ಅಪಾರ ಅನುಭವ ಹೊಂದಿದ ಹಿರಿಯ ಪತ್ರಕರ್ತರಾದ ಸೂರ್ಯ ಪ್ರಕಾಶ್ ಅವರು, ಮೈಸೂರು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪದವಿ, ತುಮಕೂರು ವಿವಿಯಲ್ಲಿ ಡಿ.ಲಿಟ್ ಪದವಿ ಪಡೆದಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬ್ಯೂರೋ ಮುಖ್ಯಸ್ಥರಾಗಿ, ದ ಪಯೋನಿರ್‌ನಲ್ಲಿ ಕಾರ್ಯನಿರ್ವಹಕ ಸಂಪಾದಕರಾಗಿ, ಏಷ್ಯಾ ಟೈಮ್ಸ್‌ನಲ್ಲಿ ಭಾರತ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಈನಾಡುವಿನಲ್ಲಿ ರಾಜಕೀಯ ಸಂಪಾದಕ, ಜೀ ನ್ಯೂಸ್‌ನ ಸಂಪಾದಕರಾಗಿ ಅನುಭವ ಹೊಂದಿದ್ದಾರೆ.
1995 ರಲ್ಲಿ ವಾಟ್ ಏಲ್ಸ್ ಇಂಡಿಯನ್ ಪಾರ್ಲಿಮೆಂಟ್ ಸಾರ್ವಜನಿಕ ಹಣ, ಖಾಸಗಿ ಕಾರ್ಯಸೂಚಿ - ಎಂಪಿಎಲ್ಎಡಿಎಸ್ ಬಳಕೆ ಮತ್ತು ದುರುಪಯೋಗ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರು ಪ್ರಸ್ತುತ ಕೇಂದ್ರ ಸರ್ಕಾರದ ಪ್ರಸಾರ ಭಾರತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 2010ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ಲಭಿಸಿದೆ. ಇವರು ಹಾಸನ ಮೂಲದವರು.
ಪದ್ಮಶ್ರೀಗೆ ಕೊರಳೊಡ್ಡಿದ ಸ್ಟಾರ್ಟ್‌ಅಪ್ ಉದ್ಯಮಿ
ಬೆಂಗೂರಿನ ಉದ್ಯಮಿ ಪ್ರಶಾಂತ್ ಪ್ರಕಾಶ್ ಅವರಿಗೆ ಭಾರತ ಸರ್ಕಾರ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. ಇವರು ಜಾಗತಿಕ ಬಂಡವಾಳ ಹೂಡಿಕೆ ಸಂಸ್ಥೆಯಾದ ‘ಆಕ್ಸೆಲ್ ಪಾರ್ಟ್‌ನರ್ಸ್’ನ ಸ್ಥಾಪಕ ಪಾಲುದಾರರಾಗಿದ್ದು, ‘ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್’ನ ಸಹ-ಸಂಸ್ಥಾಪಕರಾಗಿದ್ದಾರೆ. 1990ರ ದಶಕದಲ್ಲಿ ಉದ್ಯಮಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು 2004ರಿಂದ ಬೆಂಗಳೂರಿನ ಮತ್ತು ಭಾರತದ ಉದ್ಯಮದಲ್ಲಿ ಬಹುಮುಖ್ಯ ಬಂಡವಾಳ ಹೂಡಿಕೆದಾರರಾಗಿ ಗುರುತಿಸಿಕೊಂಡಿದ್ದಾರೆ. ಫ್ಲಿಪ್‌ಕಾರ್ಟ್, ಓಲಾ, ಫ್ರೆಶ್‌ವರ್ಕ್ಸ್, ಸ್ವಿಗ್ಗಿ ಮತ್ತು ಬುಕ್‌ಮೈಶೋ ಸೇರಿ ಭಾರತದಲ್ಲಿನ ಅತ್ಯಂತ ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನು ರೂಪಿಸುವಲ್ಲಿ ಆಕ್ಸೆಲ್ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಹೂಡಿಕೆದಾರರಾಗಿ ಮಾತ್ರವಲ್ಲದೆ, ದೇಶದ ಮತ್ತು ವಿಶೇಷವಾಗಿ ಬೆಂಗಳೂರಿನ ತಾಂತ್ರಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಪ್ರಶಾಂತ್ ಕಾರಣರಾಗಿದ್ದಾರೆ.
ಆತ್ಮರಕ್ಷಣೆಯ ಕಲೆಯಲ್ಲಿ ಪರಿಣತ ಹಾಸನ ರಘು (ಪದ್ಮಶ್ರೀ)
ಸೈನ್ಯದಲ್ಲಿದ್ದು, ಸ್ವಯಂ ನಿವೃತ್ತಿಯ ನಂತರ ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಲು ಆರಂಭಿಸಿದ ಹಾಸನ ರಘು ಅವರು, ಸ್ವತಃ ಆತ್ಮರಕ್ಷಣೆಯ ಕಲೆಯಲ್ಲಿ ಪರಿಣತರು. ನೂರಾರು ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡುವ ಮೂಲಕ ಜನಪ್ರಿಯರಾದ ಹಾಸನ ರಘು ಅವರು, ಮದ್ರಾಸ್‌ನ ಸಾಹಸ ನಿರ್ದೇಶಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.
ರಾಮನಗರದಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು, ನೂರಾರು ಸಾಹಸ ಕಲಾವಿದರನ್ನು ತಯಾರು ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.