10 ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಸಿಡಿಲಿಗೆ ಮೂವರು ಸಾವು

Published : Apr 12, 2024, 05:32 AM ISTUpdated : Apr 12, 2024, 05:33 AM IST
Karnataka First Rain

ಸಾರಾಂಶ

ನೆತ್ತಿ ಸುಡುವ ಬಿಸಿಲಿನಲ್ಲೇ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ಜನತೆಗೆ ಕೊನೆಗೂ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ.

ಬೆಂಗಳೂರು : ನೆತ್ತಿ ಸುಡುವ ಬಿಸಿಲಿನಲ್ಲೇ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ಜನತೆಗೆ ಕೊನೆಗೂ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ. ಬುಧವಾರ ರಾತ್ರಿಯಿಂದೀಚೆಗೆ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನ ಕೊಂಚ ನಿರಾಳರಾಗಿದ್ದಾರೆ. ಏತನ್ಮಧ್ಯೆ, ಹೊಸ ವರ್ಷದ ಮೊದಲ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಬಾಲಕ ಸೇರಿ ಮೂವರು ಬಲಿಯಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಬಹುತೇಕ ಕಡೆ ತಾಪಮಾನ 40 ದಾಟಿ ಜನ ಸಂಕಷ್ಟ ಅನುಭವಿಸುತ್ತಿದ್ದ ಹೊತ್ತಿನಲ್ಲೇ ವಿಜಯಪುರ, ಕಲಬುರಗಿ, ಧಾರವಾಡ, ಗದಗ, ಯಾದಗಿರಿ, ಬೀದರ್‌, ರಾಯಚೂರು, ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಕಡೆ ಮಳೆಯ ಸಿಂಚನ ಮಾಡುವ ಮೂಲಕ ವರುಣ ತಂಪಿನ ಅನುಭವ ನೀಡಿದ್ದಾನೆ.

ವಿಜಯಪುರದಲ್ಲಿ ಸಿಡಿಲಬ್ಬರ:

ವಿಜಯಪುರ ಜಿಲ್ಲೆಯಲ್ಲಿ ಸಿಡಿಲಬ್ಬರದೊಂದಿಗೆ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಕೆಲಕಾಲ ಸಾಧಾರಣ ಮಳೆಯಾಗಿದ್ದು, ಮೂವರನ್ನು ಬಲಿಪಡೆದಿದೆ. ಇಂಡಿ ತಾಲೂಕಿನಲ್ಲಿ ಗಿಡದ ಕೆಳಗೆ ಆಡು ಕಟ್ಟುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಬೀರಪ್ಪ, ಮಸಳಿ ಬಿ.ಕೆ.ಗ್ರಾಮದಲ್ಲಿ ಹೊಲದಲ್ಲಿ ಈರುಳ್ಳಿ ತುಂಬುತ್ತಿದ್ದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (45) ಹಾಗೂ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಸುನಂದಾ ಶ್ರೀಮಂತ ಡೊಳ್ಳಿ (50) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಇದರ ಜತೆಗೆ ಎಮ್ಮೆ ಸೇರಿ ಕೆಲ ಜಾನುವಾರುಗಳೂ ಸಿಡಿಲಬ್ಬರಕ್ಕೆ ಬಲಿಯಾಗಿವೆ.

ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಕೆಲಕಾಲ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಕೆಲಕಾಲ ಮಳೆಯಾಗಿದ್ದು, 44 ಡಿಗ್ರಿ ಉಷ್ಣಾಂಶದಿಂದ ತತ್ತರಿಸಿದ್ದ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲೂ ಸಿಡಿಲಬ್ಬರಕ್ಕೆ ಎಮ್ಮೆ ಮೃತಪಟ್ಟಿದ್ದು, ದಣ್ಣೂರ ಗ್ರಾಮದಲ್ಲಿ ಎತ್ತೊಂದು ಬಲಿಯಾಗಿದೆ.

ಮಲೆನಾಡಲ್ಲಿ ಮಳೆ: ಮಲೆನಾಡಲ್ಲಿ ಕೆಲ ದಿನಗಳ ಹಿಂದಷ್ಟೇ ಮಳೆಯಾಗಿ ಆ ನಂತರ ಬಿಸಿಲ ತಾಪ ಮತ್ತಷ್ಟು ಏರಿಕೆಯಾಗಿತ್ತು. ಇದೀಗ ಈ ಭಾಗದಲ್ಲಿ ಮತ್ತೆ ಮಳೆಯಾಗಿದ್ದು, ಕಾಫಿ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಕೊಡಗು ಜಿಲ್ಲೆಯ ವಿರಾಜಪೇಟೆ, ಕರಡ, ಪಾಲಂಗಾಲ ಸೇರಿ ವಿವಿಧೆಡೆ ಉತ್ತಮ ಮಳೆ ಸುರಿದಿದೆ.

ಬೊಮ್ಮಾಯಿ ಪ್ರಚಾರಕ್ಕೆ ಅಡ್ಡಿ

ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಮಧ್ಯಾಹ್ನ ಸುಮಾರು 1 ಗಂಟೆ ಉತ್ತಮ ಮಳೆಯಾಗಿದ್ದು, ಈ ವೇಳೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಚುನಾವಣಾ ಪ್ರಚಾರ ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು.

ಹಾರಿಹೋದ ಚೆಕ್‌ಪೋಸ್ಟ್‌

ಧಾರವಾಡದಲ್ಲಿ ಜಿಟಿಜಿಟಿ ಮಳೆಯಾಗಿದ್ದರೂ ಗಾಳಿ ಅಬ್ಬರ ತುಸು ಜೋರೇ ಇತ್ತು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಚೆಕ್‌ಪೋಸ್ಟ್‌ನ ತಗಡುಗಳು ಭಾರೀ ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್‌ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ