;Resize=(412,232))
ಬೆಂಗಳೂರು: ‘ಇನ್ನೇನು ಜುಲೈ ಆರಂಭವಾಗುತ್ತಿದೆ. ಆಗಸ್ಟ್, ಸೆಪ್ಟೆಂಬರ್ ಮುಗಿಯಲಿ. ಅಕ್ಟೋಬರ್ ಹೊತ್ತಿಗೆ ಅವರನ್ನು ಹೊರದಬ್ಬಿ. ಈಗಲೇ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಸಮಸ್ಯೆಯಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿಸಿದೆ.
ಕೇಂದ್ರ ಸಂಪುಟ ಪುನಾರಚನೆ, ರಾಷ್ಟ್ರೀಯ ಬಿಜೆಪಿಯ ಪದಾಧಿಕಾರಿಗಳ ನೇಮಕದ ಜತೆಗೆ ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆಯ ಬಗ್ಗೆ ಚರ್ಚೆ ಕೇಳಿಬರುತ್ತಿರುವ ವೇಳೆ ಈ ಆಡಿಯೋ ಬಹಿರಂಗಗೊಂಡಿರುವುದು ಕುತೂಹಲ ಮೂಡಿಸಿದೆ.
ಪ್ರದೀಪ್ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಸದಾನಂದಗೌಡರ ಧ್ವನಿ ಹೋಲುವ ವ್ಯಕ್ತಿ ಆಂಗ್ಲ ಭಾಷೆಯಲ್ಲಿ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿರುವ ಸುಮಾರು ಎರಡು ನಿಮಿಷದ ಆಡಿಯೋ ಭಾನುವಾರ ವೈರಲ್ ಆಗಿದ್ದು, ಈ ಪ್ರದೀಪ್ ಎಂಬುವವರು ರಾಜ್ಯಾಧ್ಯಕ್ಷ ಹುದ್ದೆಯ ಬದಲಾವಣೆ ಬಗ್ಗೆ ಅಭಿಪ್ರಾಯ ಕೇಳಿದಂತಿದೆ.
‘ಈಗ ವಿಜಯೇಂದ್ರ ಅವರು ಬರುವ ನವೆಂಬರ್ ತಿಂಗಳಿಗೆ ತಮ್ಮ ಅಧ್ಯಕ್ಷ ಹುದ್ದೆಯ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಹೀಗಿರುವಾಗ ಎರಡ್ಮೂರು ತಿಂಗಳಿಗೆ ಯಾಕೆ ಗೊಂದಲ ಸೃಷ್ಟಿ ಮಾಡಬೇಕು? ಈಗ ಮತ್ತೆ ಗೊಂದಲ ಸೃಷ್ಟಿ ಮಾಡಿದರೆ ಸಮಸ್ಯೆ ಉಂಟಾಗುತ್ತದೆ. ಎರಡು ತಿಂಗಳ ಕಾಲ ಸುಗಮವಾಗಿ ತಳ್ಳಿಕೊಂಡು ಹೋಗಿ ಬಳಿಕ ಅವರನ್ನು ಕಳುಹಿಸಬಹುದು. ಅಷ್ಟು ಹೊತ್ತಿಗೆ ಅವರ ಅವಧಿಯೂ ಮುಗಿಯುತ್ತದೆ. ಆಗ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಜತೆಗೆ ಪಕ್ಷದಲ್ಲೂ ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ. ಇದೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಬೇಕು’ ಎಂದು ಗೌಡರ ಧ್ವನಿಯ ವ್ಯಕ್ತಿ ಹೇಳುತ್ತಾರೆ.
‘ಇನ್ನೇನು ಜುಲೈ ಆರಂಭವಾಗುತ್ತಿದೆ. ಆಗಸ್ಟ್, ಸೆಪ್ಟೆಂಬರ್ ಮುಗಿಯಲಿ. ಅಕ್ಟೋಬರ್ ಹೊತ್ತಿಗೆ ಅವರನ್ನು ಹೊರದಬ್ಬಿ. ಒಂದು ವೇಳೆ ಈಗ ಅವರನ್ನು ಕೆಳಗಿಳಿಸಿದರೆ ಮತ್ತೆ ಅವರ ತಂಡ, ಲಿಂಗಾಯತ ಸಮುದಾಯ ಅಸಮಾಧಾನಗೊಳ್ಳಬಹುದು. ವಿಜಯೇಂದ್ರ ಅವರ ಅಧ್ಯಕ್ಷ ಅವಧಿ ಪೂರ್ಣಗೊಂಡ ಬಳಿಕ ಮತ್ತೊಬ್ಬ ಸಮರ್ಥ ವ್ಯಕ್ತಿಯನ್ನು ನೇಮಿಸಿದಲ್ಲಿ ಸಹಜವಾಗಿಯೇ ಎಲ್ಲವೂ ಸುಗಮವಾಗಿ ನಡೆಯಲಿದೆ ಎನ್ನುವುದು ನನ್ನ ಅಭಿಪ್ರಾಯ. ಇದನ್ನೇ ಮಾಡಿ ಎಂದು ಅಲ್ಲ. ಇದಕ್ಕಿಂತ ಉತ್ತಮ ಆಯ್ಕೆ ಇದ್ದರೆ ಅದನ್ನೇ ಮಾಡಿ. ನಾನು ಪಕ್ಷದ ನಿರ್ಣಯವನ್ನು ಬೆಂಬಲಿಸುತ್ತೇನೆ’ ಎಂದು ತಿಳಿಸುತ್ತಾರೆ.
ಆ ಕಡೆ ಪ್ರದೀಪ್ ಎಂಬ ವ್ಯಕ್ತಿ, ‘ಬಿ.ಎಲ್.ಸಂತೋಷ್ ಮತ್ತು ಪ್ರಹಾದ್ ಜೋಶಿ ಅವರು ಡಬಲ್ ಗೇಮ್ ಆಡುತ್ತಿದ್ದಾರೆ. ಜೋಶಿ ಅವರು ಇದರ ಪ್ರಮುಖ ವ್ಯವಸ್ಥಾಪಕರು’ ಎಂದು ಉಸುರುತ್ತಾನೆ. ಆಗ, ಸದಾನಂದಗೌಡರ ಧ್ವನಿ ಹೋಲುವ ವ್ಯಕ್ತಿ, ‘ನಾನು ದೇವರನ್ನು ನಂಬುತ್ತೇನೆ. ಇದರಿಂದಾಗಿಯೇ ಎಲ್ಲ ಜನರೂ ನನ್ನನ್ನು ಇಷ್ಟಪಡುತ್ತಾರೆ. ಹೀಗಾಗಿಯೇ ನಾನು ಹೊರಗೆ ಹೋದರೆ ಆಟೋರಿಕ್ಷಾ ಚಾಲಕ, ಜನಸಾಮಾನ್ಯರು ಸೆಲ್ಫಿ ತೆಗೆಸಿಕೊಳ್ಳುತ್ತಾರೆ’ ಎನ್ನುವಲ್ಲಿಗೆ ಆಡಿಯೋ ಅಂತ್ಯವಾಗುತ್ತದೆ.
ಆಡಿಯೋದಲ್ಲಿ ಏನಿದೆ?
- ಪ್ರದೀಪ್ ಎಂಬ ವ್ಯಕ್ತಿ ಜತೆ ಡೀವಿ ಅವರದ್ದು ಎನ್ನಲಾದ ಧ್ವನಿ ಸಂಭಾಷಣೆ
- ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಬದಲಾವಣೆ ಬಗ್ಗೆ ಚರ್ಚೆ
- ನವೆಂಬರ್‌ಗೆ ಬಿವೈವಿ ಅಧ್ಯಕ್ಷ ಹುದ್ದೆಯ 3 ವರ್ಷದ ಅವಧಿ ಪೂರ್ಣ ಆಗುತ್ತದೆ
- ಎರಡ್ಮೂರು ತಿಂಗಳಿಗೆ ಯಾಕೆ ಗೊಂದಲ ಸೃಷ್ಟಿ ಮಾಡಬೇಕು? ಸುಮ್ಮನಿರಿ
- ಆಗಸ್ಟ್, ಸೆಪ್ಟೆಂಬರ್ ಮುಗಿಯಲಿ. ಅಕ್ಟೋಬರ್ ಹೊತ್ತಿಗೆ ಅವರನ್ನು ಹೊರದಬ್ಬಿ
- ವಿಜಯೇಂದ್ರ ಅವಧಿ ಪೂರ್ಣಗೊಂಡ ಬಳಿಕ ಸಮರ್ಥ ವ್ಯಕ್ತಿಯನ್ನು ನೇಮಿಸಿ