;Resize=(412,232))
ಬೆಂಗಳೂರು : ಕೆಆರ್‌ಎಸ್ ಪಕ್ಷದ ಪ್ರಯತ್ನದ ಫಲವಾಗಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ಮನೆ ಯೋಜನೆ’ಯಡಿ ಮನೆ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ಫಲಾನುಭವಿಗಳಿಗೆ ಮನೆಗಳ ಕೀಲಿ ಹಸ್ತಾಂತರಿಸಲು ರಾಜೀವ್ ಗಾಂಧಿ ವಸತಿ ನಿಗಮ ಸಮ್ಮತಿ ಸೂಚಿಸಿದೆ.
ಶುಕ್ರವಾರ ಕೆಆರ್‌ಎಸ್ ಪಕ್ಷದ ಪ್ರತಿನಿಧಿಗಳ ನಿಯೋಗ ನೂರಾರು ಫಲಾನುಭವಿಗಳೊಂದಿಗೆ ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿತು. ಈ ವೇಳೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಫಲಾನುಭವಿಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈಗಾಗಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಸ್ವಾಧೀನ ಪತ್ರ ಪಡೆದಿರುವವರಿಗೆ ತಕ್ಷಣವೇ ಮನೆಗಳ ಕೀಲಿ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ.
ಅಂತೆಯೇ ನೋಂದಣಿ ಪ್ರಕ್ರಿಯೆ ಬಾಕಿ ಇರುವವರು ಅಗತ್ಯ ಅಫಿಡೆವಿಟ್ ಸಲ್ಲಿಸಿದ ತಕ್ಷಣ ಅವರಿಗೆ ಮನೆಗಳ ಕೀಲಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ 15 ದಿನಗಳೊಳಗಾಗಿ ಎಲ್ಲಾ ಬ್ಲಾಕ್‌ಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ನಿಗಮ ಸ್ಪಷ್ಟಪಡಿಸಿದೆ. ನಿಯೋಗದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಸೇರಿ ಅನೇಕ ಪದಾಧಿಕಾರಿಗಳು ಹಾಗೂ ನೂರಾರು ಫಲಾನುಭವಿಗಳು ಉಪಸ್ಥಿತರಿದ್ದರು ಎಂದು ಕೆಆರ್‌ಎಸ್ ಪಕ್ಷದ ಪ್ರಕಟಣೆ ತಿಳಿಸಿದೆ.