ಮಳೆ ಹಿನ್ನೆಲೆಯಲ್ಲಿ ಏರುಮುಖವಾಗಿದ್ದ ಈರುಳ್ಳಿ ಬೆಲೆ ಬುಧವಾರ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ಗರಿಷ್ಠ ₹45 ನಂತೆ ಮಾರಾಟವಾಗಿದೆ.
ಬೆಂಗಳೂರು : ಮಳೆ ಹಿನ್ನೆಲೆಯಲ್ಲಿ ಏರುಮುಖವಾಗಿದ್ದ ಈರುಳ್ಳಿ ಬೆಲೆ ಬುಧವಾರ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ಗರಿಷ್ಠ ₹45 ನಂತೆ ಮಾರಾಟವಾಗಿದೆ.
ಟೊಮೆಟೋ ಜೊತೆಗೆ ಬೆಲೆ ಏರಿಕೆಯತ್ತ ಮುಖ ಮಾಡಿದ್ದ ಈರುಳ್ಳಿ ಕಳೆದೆರಡು ದಿನಗಳಿಂದ ಇಳಿಕೆ ಕಂಡಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇಳಿಕೆಗೆ ಒಂದೆರಡು ದಿನ ಬೇಕು ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಕಳೆದ ವಾರದಿಂದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹3600 - ₹3800 ವರೆಗೆ ತಲುಪಿತ್ತು. ಸೋಮವಾರ ಒಂದೆರಡು ಲಾಟ್‌ಗಳು ₹3200 - ₹3400 ದರಕ್ಕೆ ವ್ಯಾಪಾರವಾಗಿದ್ದು, ಉಳಿದಂತೆ ಕ್ವಿಂಟಲ್‌ಗೆ ಕನಿಷ್ಠ ₹1500 ರಿಂದ ಗರಿಷ್ಠ ₹3200 ವರೆಗೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಇರುವುದರಿಂದ ಶೇಷಾದ್ರಿಪುರ, ಜಯನಗರ, ಗಾಂಧಿ ಬಜಾರ್ ಸೇರಿ ಇತರೆ ಮಾರುಕಟ್ಟೆಗಳಲ್ಲಿ ಕೇಜಿಗೆ ₹40- ₹45 ವರೆಗೆ ಮಾರಾಟವಾಗಿದೆ.
ಬುಧವಾರ ಯಶವಂತಪುರ ಎಪಿಎಂಸಿಗೆ 46,450 ಚೀಲ ಹಾಗೂ ದಾಸನಪುರ ಮಾರುಕಟ್ಟೆಗೆ 3,426 ಚೀಲ ಈರುಳ್ಳಿ ಬಂದಿದೆ. ಮಹಾರಾಷ್ಟ್ರದಿಂದ ಹೆಚ್ಚು ಪ್ರಮಾಣದಲ್ಲಿ ಬಂದಿದೆ. ವಿಜಯಪುರದಿಂದ ಒಂದಿಷ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಮಳೆಯಾದ ಕಾರಣ ಈರುಳ್ಳಿ ಸಾಗಾಟದ ಸಮಸ್ಯೆಯಿಂದ ದರ ಹೆಚ್ಚಿತ್ತು. ಈಗ ಮಾರುಕಟ್ಟೆಗೆ ಹೆಚ್ಚಾಗಿ ಬೆಳೆ ಬರುತ್ತಿರುವ ಕಾರಣ ದರ ನಿಯಂತ್ರಣಕ್ಕೆ ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ದರ ಕಡಿಮೆಯಾಗಲಿದೆ ಎಂದು ವ್ಯಾಪಾರಸ್ಥ ಬಿ. ರವಿಶಂಕರ್ ತಿಳಿಸಿದರು.