ಬೆಲೆ ಏರಿಕೆಗೆ ಮಾತ್ರ ‘ನಮ್ಮ ಮೆಟ್ರೋ’ : ಸೌಲಭ್ಯ ಶೂನ್ಯ! - ಬೇರೆಡೆ ವಿದ್ಯಾರ್ಥಿಗಳು, ಮಹಿಳೆಯರು, ಅಂಗವಿಕಲರಿಗೆ ರಿಯಾಯ್ತಿ

ಸಾರಾಂಶ

ದೇಶದ ಇತರೆ ಮೆಟ್ರೋ ಪ್ರಯಾಣಿಕರಿಗೆ ಹಲವು ರೀತಿಯ ಸೌಲಭ್ಯ, ರಿಯಾಯಿತಿ ನೀಡಲಾಗಿದೆ. ಆದರೆ ಇಡೀ ದೇಶದಲ್ಲಿ ಅತ್ಯಂತ ದುಬಾರಿ ಟಿಕೆಟ್‌ ದರ ವಿಧಿಸುವ ‘ನಮ್ಮ ಮೆಟ್ರೋ’ದಲ್ಲಿ ಮಾತ್ರ ಯಾವುದೇ ಸೌಲಭ್ಯ ಇಲ್ಲ. ಹಾಗಾಗಿ ಬಿಎಂಆರ್‌ಸಿಎಲ್‌ ಸಹ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

 ಬೆಂಗಳೂರು : ದೇಶದ ಇತರೆ ಮೆಟ್ರೋ ಪ್ರಯಾಣಿಕರಿಗೆ ಹಲವು ರೀತಿಯ ಸೌಲಭ್ಯ, ರಿಯಾಯಿತಿ ನೀಡಲಾಗಿದೆ. ಆದರೆ ಇಡೀ ದೇಶದಲ್ಲಿ ಅತ್ಯಂತ ದುಬಾರಿ ಟಿಕೆಟ್‌ ದರ ವಿಧಿಸುವ ‘ನಮ್ಮ ಮೆಟ್ರೋ’ದಲ್ಲಿ ಮಾತ್ರ ಯಾವುದೇ ಸೌಲಭ್ಯ ಇಲ್ಲ. ಹಾಗಾಗಿ ಬಿಎಂಆರ್‌ಸಿಎಲ್‌ ಸಹ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಇತರೆ ಮೆಟ್ರೋಗಳ ಭರ್ಜರಿ ರಿಯಾಯಿತಿ:

ಎಂಎಂಆರ್‌ಡಿಎ ಮುಂಬೈ-1 ಕಾರ್ಡ್‌ ಮೂಲಕ ಮೆಟ್ರೋ ತನ್ನ ಪ್ರಯಾಣಿಕರಿಗೆ ರಿಯಾಯಿತಿ ನೀಡುತ್ತಿದೆ. ಈ ಕಾರ್ಡ್ ವಾರದ ದಿನಗಳಲ್ಲಿ ಶೇ.5ರಷ್ಟು, ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಶೇ.10ರಷ್ಟು ರಿಯಾಯಿತಿ ಇದೆ. ಅಂಗವಿಕಲರು, ಹಿರಿಯ ನಾಗರಿಕರಿಗೆ ಶೇ.25 ರಿಯಾಯಿತಿ ಸಿಗಲಿದೆ. ಚುನಾವಣೆ ಸೇರಿ ಇತರೆ ವಿಶೇಷ ಸಂದರ್ಭದಲ್ಲಿ ದರದಲ್ಲಿ ಶೇ.10ರಷ್ಟು ರಿಯಾಯಿತಿ ಇದೆ.

ಚೆನ್ನೈ ಮೆಟ್ರೋ ಕಾರ್ಡ್‌ ಪಡೆದಲ್ಲಿ ಪ್ರತಿ ಪ್ರಯಾಣಕ್ಕೆ ಶೇ.20 ದರ ರಿಯಾಯಿತಿ ಇದೆ. ವಾಟ್ಸ್‌ಅಪ್‌ ಇ-ಟಿಕೆಟ್‌ಗೂ ಈ ಸೌಲಭ್ಯ ಸಿಗುತ್ತದೆ. ಪ್ರತಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯರು-ಪುರುಷರಿಗೆ ಪ್ರತ್ಯೇಕ ಸೈಕಲ್‌ ವ್ಯವಸ್ಥೆ ಇದೆ. ಭಾನುವಾರ ಮತ್ತು ರಾಷ್ಟ್ರೀಯ ಹಬ್ಬದ ದಿನ ಶೇ.50ರಷ್ಟು ರಿಯಾಯಿತಿಯನ್ನು ಈ ಹಿಂದೆ ಕೊಡಲಾಗಿದೆ. ಚೆನ್ನೈ, ಕೊಚ್ಚಿ ಮೆಟ್ರೊದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಇದೆ.

ದೆಹಲಿ ಮೆಟ್ರೋದ 12 ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಬೈಕ್ ಟ್ಯಾಕ್ಸಿ ಸೇವೆ ಒದಗಿಸಿದೆ. ನಾಗಪುರ ಮೆಟ್ರೋದಲ್ಲಿ ಪ್ರತಿ ನಿಲ್ದಾಣದಲ್ಲಿ ಬೇಬಿ ಕೇರ್ ಸೆಂಟರ್ ಇದೆ. ಹೈದ್ರಾಬಾದ್ ಮೆಟ್ರೋ ತಿಂಗಳಿಗೆ 71ಕ್ಕಿಂತ ಹೆಚ್ಚು ಬಾರಿ ಪ್ರಯಾಣ ಮಾಡಿದಲ್ಲಿ ಟೀ ಶರ್ಟ್ ಸೇರಿ ಇತರೆ ಉಡುಗೊರೆ ನೀಡಿದೆ. ಅಲ್ಲದೆ 20 ಬಾರಿಯ ಪ್ರಯಾಣ ದರ ಪಾವತಿಸಿ 30 ಬಾರಿ ಪ್ರಯಾಣಕ್ಕೆ ಅವಕಾಶ ನೀಡುವ ಆಫರ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ.

ಹೆಚ್ಚು ಉಪಯೋಗವಾಗದ ಸೌಲಭ್ಯ:

ಸಾಕಷ್ಟು ಒತ್ತಾಯ, ಸದನದಲ್ಲಿ ಧ್ವನಿ ಎತ್ತಿದ ಬಳಿಕ ನಮ್ಮ ಮೆಟ್ರೋ ಮೆಜೆಸ್ಟಿಕ್‌ನಲ್ಲಿ ಸ್ತನ್ಯಪಾನ ಕೇಂದ್ರ ತೆರೆದಿದೆ. ಈಚೆಗೆ ಲಗೇಜ್‌ ಲಾಕರ್‌ ವ್ಯವಸ್ಥೆ ಕಲ್ಪಿಸಿದೆ. ಗಣರಾಜ್ಯೋತ್ಸವ ಸೇರಿ ಕೆಲ ವಿಶೇಷ ಸಂದರ್ಭದಲ್ಲಿ ಮಾತ್ರ ಕಬ್ಬನ್‌ ಪಾರ್ಕ್, ಎಂ.ಜಿ.ರಸ್ತೆ, ಲಾಲ್‌ಬಾಗ್‌ಗಳಿಂದ ಹಿಂದಿರುವ ನಿಲ್ದಾಣಗಳಿಗೆ ರಿಯಾಯಿತಿಯೊಂದಿಗೆ ಪೇಪರ್‌ ಟಿಕೆಟ್‌ ಒದಗಿಸಿದೆ. ಸೈಕಲ್‌ ಪಾರ್ಕಿಂಗ್‌ಗೆ ತಾಸಿಗೆ ₹1 ನಂತೆ ಹಾಗೂ ದಿನಕ್ಕೆ ಗರಿಷ್ಠ ₹10ರವರೆಗೆ ಪಾರ್ಕಿಂಗ್‌ ಶುಲ್ಕವಿದೆ. ಇವನ್ನು ಹೊರತುಪಡಿಸಿದರೆ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರು ಶೇ.5ರಷ್ಟು ರಿಯಾಯಿತಿ ನೀಡಲಾಗಿದೆ. ಇವರಿಗೆ ಜನದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ ಸಂಚರಿಸಿದರೆ ಶೇ.5ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಲಿದ್ದಾರೆ. ಆದರೆ, ಇದು ಅಷ್ಟಾಗಿ ಪ್ರಯೋಜನಕ್ಕೆ ಬರುವುದಿಲ್ಲ .ಅಲ್ಲದೆ, ಸ್ಮಾರ್ಟ್‌ ಕಾರ್ಡ್‌ ಕನಿಷ್ಠ ಮೊತ್ತ ₹90ಕ್ಕೆ ಏರಿಕೆ ಮಾಡಿರುವುದಕ್ಕೂ ಅಸಮಾಧಾನ ವ್ಯಕ್ತವಾಗಿದೆ.

Share this article